

ಹುಣಸೂರು: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಲಾಲನೆ ಪಾಲನೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮಹಾ ತಾಯಂದಿರಾಗಿದ್ದಾರೆಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಅಭಿಪ್ರಾಯಪಟ್ಟರು.
ತಾಲೂಕು ಕಾನೂನು ಸೇವೆಗಳ ಸಮಿತಿ, ಶಿಶು ಅಭಿವೃದ್ಧಿ ಯೋಜನಾ ಕಚೇರಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಶನಿವಾರ ರೋಟರಿ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಅಪೌಷ್ಟಿಕತೆ ಕಾಣಿಸಬಾರದೆನ್ನುವ ಸದುದ್ದೇಶದಿಂದ ಪೋಷಣ್ ಅಭಿಯಾನ್ ಕಾರ್ಯಕ್ರಮ ರೂಪಿಸಲಾಗಿದೆ. ದಿನದ ಬಹುತೇಕ ಸಮಯವನ್ನು ಪುಟಾಣಿ ಮಕ್ಕಳು ಅಂಗನವಾಡಿ ಕೇಂದ್ರಗಳಲ್ಲಿ ಕಳೆಯುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರ ಮಕ್ಕಳ ಲಾಲನೆಯಲ್ಲಿ ನಿಸ್ವಾರ್ಥ ಸೇವೆ ನಡೆಸುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಆವರಣದಲ್ಲಿ ಪೌಷ್ಟಿಕಾಂಶವುಳ್ಳ ತರಕಾರಿಗಳನ್ನು ಬೆಳೆಸುವ ಪರಿಪಾಠ ಆರಂಭಗೊಂಡಿರುವುದು ಶ್ಲಾಘನೀಯ. ಗ್ರಾಮದ ಮುಖಂಡರು, ಜನಪ್ರತಿನಿಧಿಗಳು ಈ ಕಾರ್ಯಕ್ಕೆ ಕೈಜೋಡಿಸಿದಲ್ಲಿ ಭವಿಷ್ಯದ ಪ್ರಜೆಗಳು ಸದೃಢರಾಗುವ ಮೂಲಕ ಶಕ್ತಿಯುತ ದೇಶ ಕಟ್ಟಲು ಸಾಧ್ಯವಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಪೂಜಾ ಬೆಳಕೆರಿ ಮಾತನಾಡಿ, ಮಕ್ಕಳು ಜಂಕ್‌ಫುಡ್‌ಗಳಿಗೆ ಮಾರುಹೋಗುತ್ತಿದ್ದು, ಪಾಲಕರು ಮತ್ತು ಸಮಾಜ ಈ ಕುರಿತು ಗಂಭೀರ ಚಿಂತನೆ ನಡೆಸುವ ಅವಶ್ಯಕತೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ಮನೆ ಮೊದಲ ಪಾಠಶಾಲೆ. ಮನೆಯಿಂದಲೇ ಆಹಾರ ಪದ್ಧತಿಯ ಅನುಸರಣೆ ಆಗುತ್ತದೆ. ಹಾಗಾಗಿ ನಮ್ಮ ನಮ್ಮ ಮನೆಯಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಿದಲ್ಲಿ ಅಪೌಷ್ಟಿಕತೆ ನಿರ್ಮೂಲನೆ ಸಾಧ್ಯವೆಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ, ವಕೀಲ ಎಸ್.ವೆಂಕಟೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಹಿರಿಯ ಮೇಲ್ವಿಚಾರಕಿಯರಾದ ಅಕ್ಕಮಹಾದೇವಿ, ಸಂಗೀತಾ ಪೂಜಾರ್, ಸುಮಂಗಲಿ, ಸರಸ್ವತಿ, ರೋಟರಿ ಅಧ್ಯಕ್ಷ ಪಾಂಡುಕುಮಾರ್ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪೌಷ್ಟಿಕಾಂಶಯುಕ್ತ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.