ಅ.18ರಂದು ಯಾದಗಿರಿಯಲ್ಲಿ ರೈತ ಸಮಾವೇಶ

Protest Symbol
Published on

ಬರ ಮತ್ತು ನೆರೆ ಸಮಸ್ಯೆಯಿಂದ ರೈತರು ಬಳಲುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಎಲ್ಲ ಬೆಳೆ ಸಾಲವನ್ನೂ ಮನ್ನಾ ಮಾಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.18ರಂದು ಯಾದಗಿರಿಯಲ್ಲಿ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕಳೆದ 23 ವರ್ಷಗಳಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪೈಕಿ 17 ವರ್ಷ ಅತಿವೃಷ್ಟಿ ಅನುಭವಿಸಿರುವ ಅವರು, 4 ವರ್ಷ ಬರ ಅನುಭವಿಸಿದ್ದಾರೆ. ಹವಾಮಾನ ವೈಫರಿತ್ಯದಿಂದಾಗಿ ಋತುಮಾನಗಳಲ್ಲಿ ಬದಲಾವಣೆ ಆಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯವಾಗಿ ರೈತರಿಗೆ ನೀರಿನ ಸಮಸ್ಯೆ, ಬಿತ್ತನೆ ಬೀಜದ ಸಮಸ್ಯೆ ಕಾಡುತ್ತಿದೆ. ಜತೆಗೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ವಿಚಾರದಲ್ಲೂ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗೆಳು ಅನುಸರಿಸುತ್ತಿರುವ ಮಾನದಂಡವೂ ಸರಿ ಇಲ್ಲ. ಕೂಡಲೇ ಬೆಳೆ ನಷ್ಟ ಅನುಭವಿಸಿದವ ರೈತರಿಗೆ ಎಕರೆಗೆ ತಲಾ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬೆಳೆ ಆಗಷ್ಟೇ ಮೊಳಕೆ ಹೊಡೆದು ನಾಶವಾದರೆ ಪರಿಹಾರ ನೀಡುವುದಿಲ್ಲ. ಈ ರೀತಿಯ ಕೆಟ್ಟ ನಿಯಮದಿಂದಲೂ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು. ಜಿಎಸ್‌ಟಿ ಸುಧಾರಣೆಯಿಂದ ರೈತರಿಗೆ ಹೆಚ್ಚೇನು ಲಾಭವಾಗಿಲ್ಲ. ಎಲ್ಲ ರೈತರು ತೊಂದರೆಯಲ್ಲಿ ಇರುವುದರಿಂದ ಈ ಬಾರಿ ಎಲ್ಲ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೆ ಎನ್‌ಡಿಆರ್‌ಎಫ್ ಮಾನದಂಡವನ್ನು ಬದಲಿಸಬೇಕು. ಈ ಅವೈಜ್ಞಾನಿಕ ಮಾನದಂಡಗಳಿಂದಾಗಿ ರೈತರಿಗೆ ತೊಂದರೆ ಆಗುತ್ತಿದೆ ಎಂದರು. ಪ್ರಮುಖರಾದ ಹೊಸಕೋಟೆ ಬಸವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net