ಜುಬೀನ್ ಗಾರ್ಗ್ ಸಾವು: Congress-BJP ಜಟಾಪಟಿ; ನಾನು ಅದನ್ನು ಕೊಲೆ ಎನ್ನುತ್ತೇನೆ ಎಂದ ಅಸ್ಸಾಂ ಸಿಎಂ; ಜನರೊಂದಿಗೆ ಸಾಕ್ಷ್ಯ ಹಂಚಿಕೊಳ್ಳಿ ಎಂದ ಕಾಂಗ್ರೆಸ್

ವಿಜಯವಾಣಿ - 2025-11-04T105121.512
Published on

ಗುವಾಹಟಿ: ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಖ್ಯಾತ ಬಾಲಿವುಡ್ ಮತ್ತು ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಮತ್ತು ಕಾಂಗ್ರೆಸ್(Congress-BJP) ನಡುವೆ ಜಟಾಪಟಿ ನಡೆದಿದ್ದು, ನಾನು ಅದನ್ನು ಅಪಘಾತ ಅಂತ ಕರೆಯುವುದಿಲ್ಲ, ಅದು ಕೊಲೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸಂಗೀತ ಐಕಾನ್ ಜುಬೀನ್ ಗಾರ್ಗ್ ಸಾವು ಆಕಸ್ಮಿಕವಲ್ಲ. ಅದು ಕೊಲೆ. ಈ ಬಗ್ಗೆ ಪ್ರಕರಣದ ಚಾರ್ಜ್​ಶೀಟ್ ಡಿಸೆಂಬರ್ 17ರೊಳಗೆ ಸಲ್ಲಿಸಲು ಡೆಡ್​ಲೈನ್ ನೀಡಲಾಗಿದೆ. ಡಿ. 08ರೊಳಗೆ ಅದು ನಮಗೆ ಸಿಗಬಹುದು. ಘಟನೆ ವಿದೇಶಿ ನೆಲದಲ್ಲಿ ನಡೆದಿರುವುದರಿಂದ, ಆರೋಪಪಟ್ಟಿ ಸಲ್ಲಿಸುವ ಮೊದಲು ಗೃಹ ಸಚಿವಾಲಯದ (MHA) ಅನುಮೋದನೆ ಅಗತ್ಯ ಎಂದು ಹೇಳಿದ್ದಾರೆ.

ವಿದೇಶಿ ನೆಲದಲ್ಲಿ ಏನಾದರೂ ನಡೆದರೆ, ನಾವು ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ಗೃಹ ಸಚಿವಾಲಯದ ಅನುಮೋದನೆ ಪಡೆಯಬೇಕು. ಈ ಬಗ್ಗೆ ಅನುಮೋದನೆ ಪಡೆಯಲು ನಾನು ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದೇನೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಎಸ್​ಐಟಿ ಅನುಮೋದನೆ ಕೋರಿ ಗೃಹಸಚಿವಾಲಯಕ್ಕೆ ಪತ್ರ ಬರೆಯಲಿಎ ಎಂದು ತಿಳಿಸಿದ್ದಾರೆ.

ಜುಬೀನ್ ಅವರ ಸಾವು ಕೊಲೆಯಾಗಿದ್ದರೆ ಸಾಕ್ಷ್ಯ ಹಂಚಿಕೊಳ್ಳಿ ಎಂದ ಕಾಂಗ್ರೆಸ್

ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್,  ಸಿಎಂ ಜುಬೀನ್ ಅವರ ಸಾವನ್ನು ಕೊಲೆ ಎಂದು ಹೇಳಿದ್ದಾರೆ. ಆದರೆ ಅದು ಹೇಗೆ ನಡೆಯಿತು ಎಂಬುದನ್ನು ಅವರು ನಮಗೆ ಹೇಳಲಿಲ್ಲ. ಜುಬೀನ್ ಕೊಲೆಯಾಗಿದ್ದರೆ, ಅದು ಹೇಗೆ ನಡೆಯಿತು ಎಂಬುದನ್ನು ಸಿಎಂ ಜನರಿಗೆ ಹೇಳಬೇಕು ಎಂದು ಒತ್ತಾಯಿಸಿದ್ದಾರೆ.

ಸೆ. 19ರಂದು ಸಿಂಗಾಪುರದಲ್ಲಿ ಸಮುದ್ರದಲ್ಲಿ ಈಜುತ್ತಿದ್ದಾಗ ಜುಬೀನ್ ಗಾರ್ಗ್ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಅವರು 4ನೇ ಈಶಾನ್ಯ ಭಾರತ ಉತ್ಸವದಲ್ಲಿ (NEIF) ಭಾಗವಹಿಸಲು ಅಲ್ಲಿಗೆ ಹೋಗಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್​ಐಟಿ ಎನ್‌ಇಐಎಫ್ ಸಂಘಟಕ ಶ್ಯಾಮಕಾನು ಮಹಾಂತ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net