

ನವದೆಹಲಿ: ಸದ್ಯ ದೇಶದೆಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳು ಸ್ತಬ್ಧಗೊಂಡಿವೆ. ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಪಾಠ ಮಾಡಲು ಬೋಧಕರಿಗೆ ಸೂಚಿಸಲಾಗುತ್ತಿದೆ. ಇದಲ್ಲದೇ, ಹಲವು ಸಂಘ-ಸಂಸ್ಥೆಗಳು ಸಿಬ್ಬಂದಿಗೆ ವರ್ಕ್ ಫ್ರಾಮ್ ಹೋಮ್ ನೀಡಿವೆ. ಅವರೊಂದಿಗೆ ಸಂಪರ್ಕದಲ್ಲಿರಲು ಹೆಚ್ಚಾಗಿ ವಿಡಿಯೋ ಕಾನ್ಫ್ರೆನ್ಸಿಂಗ್ ಆ್ಯಪ್ಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಚೀನಾ ನಿರ್ಮಿತ ಝೂಮ್ ಆ್ಯಪ್.
ಇದೀಗ ಝೂಮ್ ಬಳಕೆದಾರರಿಗೆ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ಜೂಮ್ ಆ್ಯಪ್ ಸುರಕ್ಷಿತವಲ್ಲ, ಅದರಲ್ಲೂ ಸರ್ಕಾರಿ ಉದ್ದೇಶ ಅಥವಾ ಕರ್ತವ್ಯಗಳಿಗೆ ಇದನ್ನು ಬಳಸುವಂತೆಯೇ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದೆ.
ಹೌದು, ಝೂಮ್ ಆ್ಯಪ್ನಲ್ಲಿದ್ದ ಪಾಸ್ವರ್ಡ್ಗಳು ಸೋರಿಕೆಯಾಗಿವೆ, ಕಾನ್ಫ್ರೆನ್ಸಿಂಗ್ ನಡೆಸುತ್ತಿರುವಾಗಲೇ ಹ್ಯಾಕ್ ಮಾಡಲಾಗುತ್ತಿದೆ ಎಂಬ ವರದಿಗಳು ಬಂದ ಬಳಿಕವಂತೂ ಇದರ ಬಗ್ಗೆ ಹೆಚ್ಚು ಜಾಗೃತೆ ವಹಿಸುವಂತೆ ಸೂಚಿಸಿದೆ.
ಇನ್ನು, ಅನಿವಾರ್ಯ ಕಾರಣಗಳಿಗಾಗಿ ಇದನ್ನೇ ಬಳಸಲೇಬೇಕಾದವರು ಮುಂಜಾಗರೂಕತೆ ವಹಿಸುವುದು ಒಳ್ಳೆಯದು ಎಂದು ಕೆಲ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಸರ್ಕಾರದ ಅಧೀನದ ಸೈಬರ್ ಸೆಕ್ಯುರಿಟಿ ಏಜೆನ್ಸಿಯಾಗಿರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಬಿಡುಗಡೆ ಮಾಡಿದೆ.
ಕಾನ್ಫರೆನ್ಸ್ ರೂಮ್ನಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶ ನೀಡಬೇಡಿ. ಬೇರೆಯವರ ಟರ್ಮಿನಲ್ಗಳಲ್ಲೂ ಇತರರಿಗೆ ಅನುದ್ದೇಶಿತ ಚಟುವಟಿಕೆಗಳನ್ನು ನಡೆಸಲು ಬಿಡಬೇಡಿ, ಬಳಕೆದಾರರಿಗೆ ಭಾಗವಹಿಸಲು ಪಾಸ್ವರ್ಡ್ ಹಾಗೂ ಲಾಗಿನ್ಗಳನ್ನು ಒದಗಿಸಿ. ಈ ಎಲ್ಲ ಕಾರ್ಯಗಳನ್ನು ಲಾಗಿನ್ ಆದ ಬಳಿಕ ಅವರವರ ಸೆಟಿಂಗ್ಸ್ನಲ್ಲಿಯೇ ನಿರ್ವಹಿಸಬಹುದು ಎಂದು ಸಂಸ್ಥೆ ತಿಳಿಸಿದೆ.
ಸದ್ಯ ಕಾರ್ಪೋರೇಟ್ ಹಾಗೂ ಇತರ ಸಂಸ್ಥೆಗಳಲ್ಲಿ ವೆಬಿನಾರ್ ಹಾಗೂ ವಿಡಿಯೋ ಕಾನ್ಫರೆನ್ಸ್, ಆನ್ಲೈನ್ ಪಾಠಗಳಿಗೆ ಝೂಮ್ ಆ್ಯಪ್ ಬಳಸಲಾಗುತ್ತದೆ. ಲಾಕ್ಡೌನ್ ಸಮಯದಲ್ಲಿ ಇದರ ಬಳಕೆಯಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಡಿಸೆಂಬರ್ನಲ್ಲಿ 1 ಕೋಟಿ ಇದ್ದ ಬಳಕೆದಾರರ ಸಂಖ್ಯೆ ಮಾರ್ಚ್ ವೇಳೆಗೆ 20 ಕೋಟಿಗೆ ತಲುಪಿದೆ.