

ನವದೆಹಲಿ: ಲಾಕ್ಡೌನ್ ಸಮಯದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ಗಳು ಜನರಿಗೆ ಒಂದು ರೀತಿಯಲ್ಲಿ ವರದಾನವಾಗಿ ಪರಿಗಣಿಸಿವೆ. ಮನೆಯಿಂದ ಹೊರಹೋಗಲಾಗದ ಸಂದರ್ಭದಲ್ಲಿ ಬಾಂಧವ್ಯ ಬೆಸೆಯುವ ಸಾಧನಗಳಾಗಿವೆ. ಶುಭ ಕಾರ್ಯಗಳಿಗೆ ಸಾಕ್ಷಿಯಾದವು. ಮದುವೆ, ನಾಮಕರಣಗಳೂ ಇದರ ಮೂಲಕ ನಡೆದಿವೆ.
ಇನ್ನೂ ಶೈಕ್ಷಣಿಕ ಹಾಗೂ ಕಾರ್ಪೋರೇಟ್ ವಲಯದಲ್ಲಿ ಇವುಗಳ ಕೊಡುಗೆ ಅಪಾರ. ಕೆಲ ಸಂಸ್ಥೆಗಳು ತಮ್ಮದೇ ಆದ ಆ್ಯಪ್ಗಳನ್ನು ಅಭಿವೃದ್ಧಿಸಿಕೊಂಡಿದ್ದರೂ, ಹೆಚ್ಚಿನ ಸಂಸ್ಥೆಗಳು ಬಳಕೆಗೆ ಉಚಿತವಾಗಿದ್ದ ಆ್ಯಪ್ಗಳನ್ನೇ ಅವಲಂಬಿಸಿದ್ದವು.
ಇನ್ನು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಮಾಡುವಂತೆ ಬೋಧಕರಿಗೆ ದುಂಬಾಲು ಬಿದ್ದವು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೊಬೈಲ್ಗಳಲ್ಲಿ ವಿಡಿಯೋ ಆ್ಯಪ್ಗಳು ಸ್ಥಾನ ಪಡೆದುಕೊಂಡವು. ಹೀಗೆ ಜನಪ್ರಿಯತೆಗೆ ಬಂದಿದ್ದೇ ಚೀನಾ ನಿರ್ಮಿತ ಝೂಮ್ ಆ್ಯಪ್.
ಇದರಂತೆ ಹೌಸ್ ಪಾರ್ಟಿ, ಗೂಗಲ್ನ ಹ್ಯಾಂಗ್ಔಟ್, ವೆಬೆಕ್ಸ್, ಮೈಕ್ರೋಸಾಫ್ಟ್ನ ಟೀಮ್ಸ್, ಬ್ಲ್ಯೂಜೀನ್ಸ್ ಮೊದಲಾದ ವಿಡಿಯೋ ಆ್ಯಪ್ಗಳ ಬಳಕೆ ಹಾಗೂ ಮೌಲ್ಯ ಏಕಾಏಕಿ ಹೆಚ್ಚಾಯಿತು.
ಹೌಸ್ ಪಾರ್ಟಿ ಆ್ಯಪ್ ಮೂಲಕ ಸ್ಮಾರ್ಟ್ಪೋನಲ್ಲಿರುವ ಮಾಹಿತಿಗಳನ್ನು ಕದಿಯಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಜನರು ಇದನ್ನು ಫೋನ್ಗಳಿಂದ ಅನ್ಇನ್ಸ್ಟಾಲ್ ಮಾಡಲಾರಂಭಿಸಿದರು. ಇದು ಸುಳ್ಳು ಎಂದ ಹೇಳಿದರೂ ಜನ ನಂಬಲಿಲ್ಲ.
ಲಾಕ್ಡೌನ್ ಸಮಯದಲ್ಲಿ ಝೂಮ್ ಆ್ಯಪ್ ಬಳಕೆದಾರರ ಸಂಖ್ಯೆ ದಿನಕ್ಕೆ ಒಂದು ಕೋಟಿಯಿಂದ 20 ಕೋಟಿಗೆ ಏರಿಕೆಯಾಯಿತು. ಇದಕ್ಕೆ ಕಾರಣವೇನೆಂದು ಹುಡುಕುವುದಾದರೆ, ವಹಿವಾಟು ಕೇಂದ್ರೀತವಾಗಿದ್ದ ವಿಡಿಯೋ ಕಾನ್ಫರೆನ್ಸಿಂಗ್ನ್ನು ಜಾಗತಿಕವಾಗಿ ವಿಡಿಯೋ ಸಂಭಾಷಣೆ ಸಾಧನವಾಗಿ ಪರಿವರ್ತಿಸಿದ್ದು ಝೂಮ್ ಆ್ಯಪ್. ಇದರಿಂದಾಗಿ ಅಪರಿಚಿತರೊಂದಿಗೂ ನೀವು ವಿಡಿಯೋ ಸಂಭಾಷಣೆ ನಡೆಸಬಹುದು. ಈ ಸೌಲಭ್ಯವೇ ಇದಕ್ಕೆ ಮುಳುವಾಯ್ತು. ಬಹುದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಯ್ತು.
ಕೋಡಿಂಗ್ಗಳಲ್ಲಿ ವೈರಸ್ಗಳು ಪತ್ತೆಯಾದವು, ಫೇಸ್ಬುಕ್ನೊಂದಿಗೆ ಮಾಹಿತಿ ಹಂಚಿಕೊಂಡಿದ್ದು ಬೆಳಕಿಗೆ ಬಂತು ಹಾಗೂ ಬಳಕೆದಾರರ ಪಾಸ್ವರ್ಡ್ಗಳು ಸೋರಿಕೆಯಾದವು, ಬಳಕೆ ಸಮಯದಲ್ಲಿ ಹ್ಯಾಕ್ ಮಾಡಲಾಗುತ್ತಿರುವುದು ಗಮನಕ್ಕೆ ಬಂದಾಗ ಹುಟ್ಟಿಕೊಂಡ ಪದವೇ 'ಝೂಮ್ ಬಾಂಬಿಂಗ್'- ಅಂದರೆ ಆಮಂತ್ರಿತರಲ್ಲದವರೂ ನಿಮ್ಮೊಂದಿಗೆ ವಿಡಿಯೋ ಸಂಭಾಷಣೆಗೆ ಇಳಿಯುವುದು. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರ ಈ ವಿಡಿಯೋ ಆ್ಯಪ್ ಬಳಸುವುದು ಬೇಡ ಎಂದಿತು.
ಪ್ರಸ್ತುತ ಇದರಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂಬುದು ಕಂಪನಿಯ ವಾದ. ಆದರೆ, 'ಝೂಮ್ ಬಾಂಬಿಂಗ್'ಗೆ ತಡೆ ಬಿದ್ದಿದೇಯಾ ಎಂಬುದನ್ನು ಬಳಕೆದಾರರೇ ಹೇಳಬೇಕು.