

ಚಿತ್ರ: ಜೀಬ್ರಾ
ನಿರ್ದೇಶನ: ಈಶ್ವರ ಕಾರ್ತಿಕ್
ತಾರಾಗಣ: ಸತ್ಯದೇವ್, ಡಾಲಿ ಧನಂಜಯ್, ಸುನೀಲ್, ಪ್ರಿಯಾ ಭವಾನಿ ಶಂಕರ್, ಅಮೃತ್ ಅಯ್ಯಂಗಾರ್, ಸತ್ಯರಾಜ್, ಗರುಡ ರಾಮ್ ಮತ್ತಿತರರು
ಶಿವ ಸ್ಥಾವರಮಠ
ಬ್ಯಾಂಕ್ ವ್ಯವಹಾರದಲ್ಲಿ ಸೂಕ್ಷ್ಮತೆ ಮುಖ್ಯ. ವ್ಯವಹರಿಸುವಾಗ ಒಂದು ಅಂಕಿ-ಸಂಖ್ಯೆ ಹಿಂದೆ-ಮುಂದೆಯಾದರೂ ಯಾರೋ ದುಡ್ಡು ಇನ್ನೊಬ್ಬರ ಪಾಲಾಗುತ್ತದೆ. ಇಂತಹದ್ದೆ ಒಂದು ರಾದ್ಧಾಂತ ಕಥೆಯನ್ನು ಆ್ಯಕ್ಷನ್, ಥ್ರಿಲ್ಲರ್ ಹಾಗೂ ಕಾಮಿಡಿ ಮೂಲಕ ನಿರ್ದೇಶಕ ಈಶ್ವರ್ ಕಾರ್ತಿಕ್ ‘ಜೀಬ್ರಾ’ದಲ್ಲಿ ನಿರೂಪಿಸಿದ್ದಾರೆ.
ಸ್ವಾತಿಯ (ಪ್ರಿಯಾ ಭವಾನಿ ಶಂಕರ್) ಒಂದು ಕಣ್ತಪ್ಪಿನಿಂದಾಗಿ 4 ಲಕ್ಷ ರೂ. ಹಣ ಬೇರೆಯವರಿಗೆ ವರ್ಗಾವಣೆಯಾಗಿಬಿಡುತ್ತದೆ. ಆ ವ್ಯಕ್ತಿ ಇಡೀ ಆ ಹಣವನ್ನು ಡ್ರಾ ಮಾಡಿಬಿಡುತ್ತಾನೆ. ಇಂತಹ ಸಂಕಷ್ಟದಲ್ಲಿದ್ದಾಗ ಸ್ವಾತಿಗೆ ಸೂರ್ಯ(ಸತ್ಯದೇವ್) ನೆರವಿಗೆ ಬರುತ್ತಾನೆ. ಆತ ಕೂಡ ಬ್ಯಾಂಕ್ ಉದ್ಯೋಗಿ. ಹಲವು ರೀತಿಯ ಸರ್ಕಸ್ ಮಾಡಿ ಸೂರ್ಯ ಕೊನೆಗೆ ಆ ಹಣವನ್ನು ಮರಳಿ ಪಡೆಯುತ್ತಾನೆ. ಆದರೆ, ಏನೋ ಮಾಡಲು ಹೋಗಿ ಏನೋ ಆಯಿತು ಎಂಬಂತೆ 4 ಲಕ್ಷ ರೂಪಾಯಿ ಪಡೆಯಲು ಹೋಗಿ ಮುಂದೆ 5 ಕೋಟಿ ರೂ.ಜಾಲದಲ್ಲಿ ಸಿಕ್ಕಿಬೀಳುತ್ತಾನೆ. ಇಲ್ಲಿಂದ ಕಥೆ ರೋಚಕ ಪಡೆದು ಮುಂದುವರಿಯುತ್ತದೆ.
ಈಶ್ವರ್ ಕಾರ್ತಿಕ್ ಬ್ಯಾಂಕ್ ಸುತ್ತ ಸುತ್ತುವ ಕಥೆ ಹೇಳಿದ್ದು, ಪ್ಯಾನ್ ಇಂಡಿಯಾಕ್ಕೆ ಅನುಗುಣವಾಗಿ ಕಥೆ ಹೇಳಿದ್ದಾರೆ. ಬರವಣಿಗೆ ಸಶಕ್ತವಾಗಿದ್ದು, ಅಧ್ಯಯನ ಎದ್ದು ಕಾಣುತ್ತದೆ. ಇನ್ನು ಸ್ವಲ್ಪ ಪರಿಣಾಮಕಾರಿಯಾಗಿ ನಿರೂಪಣೆ ಮಾಡುವ ಅವಕಾಶ ಇತ್ತು. ಕೆಲವು ರೋಚಕ, ಟ್ವಿಸ್ಟ್‌ನ ದೃಶ್ಯಗಳಿಗೆ ಲಾಜಿಕ್ ಇಲ್ಲವಾಗಿದೆ. ಅದು ಬಿಟ್ಟರೆ, ಉಳಿದಂತೆ ಆ್ಯಕ್ಷನ್, ಥ್ರಿಲ್ಲರ್ ಹಾಗೂ ಕಾಮಿಡಿಗೆ ಸಾಕಷ್ಟು ಜಾಗ ನೀಡಿದ್ದಾರೆ.
ಸತ್ಯದೇವ್ ನಟನೆಯ ಚೆನ್ನಾಗಿ ಮೂಡಿಬಂದಿದೆ. ಕೆಲವು ತೊಂದರೆಗಳಲ್ಲಿ ಸಿಲುಕಿದಾಗ ಒಬ್ಬ ಮನುಷ್ಯನ ಹಾವ ಭಾವ ಹೇಗಿರುತ್ತದೆ ಎಂಬುದು ಸಹಜವಾಗಿ ತೋರಿಸಿದ್ದಾರೆ. ಈ ಮೂಲಕ ಸತ್ಯದೇವ್ ನಟನೆ ಇಷ್ಟವಾಗುತ್ತದೆ. ಡಾಲಿ ಧನಂಜಯ್ ಅಬ್ಬರದ ಜತೆಗೆ ಭಾವನೆಯಲ್ಲಿ ಮುಳುಗಿದ್ದಾರೆ. ಅಮೃತಾ ಅಯ್ಯಂಗಾರ್ ಕೇವಲ ಐದು ನಿಮಿಷಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಪ್ರಿಯಾ ಭವಾನಿ ಶಂಕರ್, ಸುನೀಲ್, ಗರುಡ ರಾಮ್ ಪಾತ್ರಗಳು ಮೆಚ್ಚುಗೆ ಗಳಿಸುತ್ತವೆ.