ಯೋಗಿ ಪರ ಯುವವಾಹಿನಿ: ಗೋರಖಪುರದಲ್ಲಿ ಬೂತ್ ಮಟ್ಟದಲ್ಲಿ ಪ್ರಚಾರ ಆರಂಭಿಸಿದ ಸಂಸ್ಥೆ

Yogi
Published on

ಗೋರಖಪುರ: ಯುವ ಜನರಲ್ಲಿ ರಾಷ್ಟ್ರ ಜಾಗೃತಿ ಮೂಡಿಸುವುದಕ್ಕಾಗಿ ಯೋಗಿ ಆದಿತ್ಯನಾಥ ಎರಡು ದಶಕಗಳ ಹಿಂದೆ ಹುಟ್ಟುಹಾಕಿದ ಹಿಂದು ಯುವ ವಾಹಿನಿ ಈಗ ಮತ್ತೆ ಸಕ್ರಿಯವಾಗಿದೆ. ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಸಂಸ್ಥಾಪಕ ಯೋಗಿ ಆದಿತ್ಯನಾಥರ ಪರವಾಗಿ ಪ್ರಚಾರಕ್ಕೆ ಈ ಸಂಘಟನೆ ಮುಂದಾಗಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೋರಖಪುರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ ಬಳಿಕ, ಹಿಂದು ಯುವ ವಾಹಿನಿಯ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕೆಲಸ ಶುರುಮಾಡಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಸಮನ್ವಯ ಸಾಧಿಸಿರುವ ಈ ಯುವಕರು ‘ಮಹಾರಾಜ್ ಜೀ’ (ಯೋಗಿ ಆದಿತ್ಯನಾಥರನ್ನು ಸಂಭೋದಿಸುವ ರೀತಿ) ಅವರ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದ್ದಾರೆ. 2002ರಲ್ಲಿ ಬಿಜೆಪಿಯಿಂದ ಹೊರಬಿದ್ದ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ ಅವರು ಸ್ಥಾಪಿಸಿದ ಸಂಘಟನೆ ಇದು. ಗೋರಖಪುರದಲ್ಲಿ ಬಹುಬೇಗ ಜನಪ್ರಿಯತೆ ಮತ್ತು ಯುವಜನರನ್ನು ಸಂಘಟಿಸುವಲ್ಲಿ ಇದು ಯಶಸ್ವಿಯಾಗಿತ್ತು. ಆದಿತ್ಯನಾಥರ ಪಾಲಿನ ಸಂಘಟನಾ ಶಕ್ತಿ ಇದು. ಅವರ ಪ್ರತಿ ಗೆಲುವಿನ ಹಿಂದೆ ಈ ಸಂಘಟನೆಯ ಮಹತ್ವದ ಪಾತ್ರ ದಾಖಲಾಗಿದೆ.

ಸಿಧು ವಿರುದ್ಧ ಐಐಎಸ್ ಅಧಿಕಾರಿ ಕಣಕ್ಕೆ: ಪಂಜಾಬ್​ನ ಅಮೃತಸರ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಐಎಎಸ್ ಅಧಿಕಾರಿ ಡಾ. ಜಗಮೋಹನ್ ಸಿಂಗ್ ರಾಜು ಕಣಕ್ಕೆ ಇಳಿದಿದ್ದಾರೆ. ತಮಿಳುನಾಡಿನಲ್ಲಿ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಸಿಂಗ್, ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ಗೆ ಕಳುಹಿಸಿರುವ ರಾಜೀನಾಮೆ ಪತ್ರದಲ್ಲಿ ಈ ವಿಚಾರ ಉಲ್ಲೇಖಿಸಿದ್ದಾರೆ. ಪಂಜಾಬಿನ ಪರಿಸ್ಥಿತಿ ತುಂಬ ನೋವು ತರುವಂಥದ್ದು. ಹೀಗಾಗಿ ಮಣ್ಣಿನ ಮಗನೆಂಬ ನೆಲೆಯಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಡಾ.ಸಿಂಗ್ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಕೇಂದ್ರ ಸರ್ಕಾರ ಅಂಗೀಕರಿಸಿತ್ತು.

ಅಖಿಲೇಶ್ ಕಾಪ್ಟರ್​ಗೆ ತಡೆ?: ದೆಹಲಿಯಿಂದ ಉತ್ತರ ಪ್ರದೇಶದ ಮುಜಾಫರನಗರ ಕಡೆಗೆ ಹೆಲಿಕಾಪ್ಟರ್​ನಲ್ಲಿ ಹೊರಟಿದ್ದ ನನ್ನನ್ನು ದೆಹಲಿಯಲ್ಲೇ ತಡೆಯಲಾಗಿದೆ. ಇದೇ ವೇಳೆ ಬಿಜೆಪಿ ನಾಯಕರೊಬ್ಬರು ದೆಹಲಿಯಿಂದ ಹೊರಟಿದ್ದು, ಅವರನ್ನು ತಡೆದಿಲ್ಲ. ಇದು ಬಿಜೆಪಿಯವರ ಪಿತೂರಿ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಸೋಲು ಎದುರಾಗುವುದೆಂಬ ಹತಾಶೆ ಅವರನ್ನು ಆವರಿಸಿರುವುದಕ್ಕೆ ಸಾಕ್ಷಿ ಎಂದು ಅಖಿಲೇಶ್ ಯಾದವ್ ಶುಕ್ರವಾರ ಅಪರಾಹ್ನ ಟ್ವೀಟ್ ಮಾಡಿದ್ದಾರೆ. ಬಿಜೆಪಿ ರ್ಯಾಲಿಯ ಫೋಟೋವನ್ನೂ ಈ ಟ್ವೀಟ್ ಜತೆಗೆ ಶೇರ್ ಮಾಡಿದ್ದಾರೆ.

ನವಜೋತ್ ಸಿಧು ಧನದಾಹಿ!: ನವಜೋತ್ ಸಿಂಗ್ ಸಿಧು ಧನದಾಹಿ. ತಾಯಿಯನ್ನು ವೃದ್ಧಾಪ್ಯದಲ್ಲಿ ಹಣದ ಕಾರಣಕ್ಕೆ ಪರಿತ್ಯಜಿಸಿದ ವ್ಯಕ್ತಿ. ಅಂತಹ ಕ್ರೂರಿ ಸಿಧು. ನಾವು ಬಹಳ ಕಷ್ಟಕಾಲವನ್ನು ಎದುರಿಸಿದ್ದೇವೆ. ತಂದೆಯ ಮರಣಾನಂತರ 1986ರಲ್ಲೇ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದ. ತಾಯಿಯೊಂದಿಗೆ ಹೊರಬಿದ್ದ ನಾನು ಆಕೆಯನ್ನು ನೋಡಿಕೊಂಡೆ. ನಾಲ್ಕು ತಿಂಗಳು ಆಸ್ಪತ್ರೆಯಲ್ಲಿದ್ದಳು. 1989ರಲ್ಲಿ ರೈಲ್ವೆ ನಿಲ್ದಾಣದಲ್ಲಿ ಅಮ್ಮ ಮೃತಪಟ್ಟಳು. ನನ್ನ ಬಳಿ ಪ್ರತಿಯೊಂದಕ್ಕೂ ದಾಖಲೆಗಳಿವೆ. ಅವುಗಳನ್ನು ಬೇಕಾದರೆ ಬಿಡುಗಡೆ ಮಾಡುವೆ ಎಂದು ಸಿಧು ಅವರ ಹಿರಿಯ ಸಹೋದರಿ ಸುಮನ್ ತರ್ ಚಂಡೀಗಢದಲ್ಲಿ ಸುದ್ದಿಗೋಷ್ಟಿ ನಡೆಸಿ ಆರೋಪಿಸಿದರು. ಸುಮನ್ ತರ್ ಅಮೆರಿಕದಲ್ಲಿ ನೆಲೆಸಿದ್ದು, ಸದ್ಯ ಚಂಡೀಗಢಕ್ಕೆ ಬಂದು ಸಿಧು ವಿರುದ್ಧ ಅಭಿಯಾನ ಶುರುಮಾಡಿದ್ದಾರೆ.

ಸಮಾಜವಾದಿ ಪಕ್ಷಕ್ಕೆ ರಾಜ್?: ಕಾಂಗ್ರೆಸ್​ನಲ್ಲಿ ಪ್ರಭಾವಿಯಾಗಿ ಗುರುತಿಸಿ ಕೊಂಡಿದ್ದ ರಾಜ್​ಬಬ್ಬರ್ ಸಮಾಜವಾದಿ ಪಕ್ಷಕ್ಕೆ ವಾಪಸಾಗುವ ಸೂಚನೆ ನೀಡಿದ್ದಾರೆ. ಅಖಿಲೇಶ್ ಯಾದವ್ ಜತೆಗೆ ನಿರಂತರ ಸಂಪರ್ಕದಲ್ಲಿರುವ ಅವರು ಶೀಘ್ರವೇ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ನಾಯಕ ಫಕ್ರುಲ್ ಹಸನ್ ಚಾಂದ್ ಹೇಳಿದ್ದಾರೆ. ಆರ್​ಪಿಎನ್ ಸಿಂಗ್ ಬಿಜೆಪಿ ಸೇರ್ಪಡೆ ಬಳಿಕ ಕಾಂಗ್ರೆಸ್​ಗೆ ರಾಜ್​ಬಬ್ಬರ್ ಆಘಾತ ನೀಡಲು ಮುಂದಾಗಿದ್ದಾರೆ.

ಅಖಿಲೇಶ್ ಪಾಕ್ ಬೆಂಬಲಿಗ, ಯೋಗಿ ಆರೋಪ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಜಿನ್ಹಾನ ಆರಾಧಕರು. ನಾವು ಸರ್ದಾರ್ ಪಟೇಲರನ್ನು ಆರಾಧಿಸುವವರು. ಪಾಕಿಸ್ತಾನ ಅವರಿಗೆ ಹತ್ತಿರ. ನಾವು ತಾಯಿ ಭಾರತಿಗಾಗಿ ಪ್ರಾಣವನ್ನೇ ಬಲಿದಾನ ಮಾಡುವಂಥವರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿದ ವೇಳೆ, ‘ಸರ್ದಾರ್ ಪಟೇಲ್, ಗಾಂಧಿ, ಜಿನ್ಹಾ ಎಲ್ಲರೂ ಒಂದೇ ಕಡೆ ಓದಿದವರು. ಬ್ಯಾರಿಸ್ಟರ್ ಪಡೆದವರು. ಅದೇ ರೀತಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ್ದರು’ ಎಂದು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net