ಯುವಕರು ಉದ್ಯೋಗಿ ಬದಲು ಉದ್ಯಮಿಯಾಗಿ: ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್

Published on

ಬೆಂಗಳೂರು:
ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ನವೋದ್ಯಮಗಳಲ್ಲಿ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿದ್ದು, ಇದನ್ನು ಬಳಕೆ ಮಾಡಿಕೊಂಡು ಉದ್ಯಮಿಗಳಾಗಬೇಕೆಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಹೇಳಿದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಕಾಲೇಜು ಶನಿವಾರ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ವೇಗ ಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಯುವಕರು ಉದ್ಯೋಗಿ ಆಗಿ ಸೀಮಿತವಾಗುವ ಬದಲು ಉದ್ಯಮಿಯಾಗಿ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುವಂತೆ ಸೂಚಿಸಿದರು.
ಇಸ್ರೋ ವತಿಯಿಂದ ಗಗನಯಾನ, 400 ಕಿಮೀ ಎತ್ತರಕ್ಕೆ ಗಗನಯಾತ್ರಿಗಳನ್ನು ಕೊಂಡೊಯ್ಯುವ ಆಂತರಿಕ್ಷಯಾನ ನಡೆಸುಲಾಗುತ್ತಿದೆ. 2035ಕ್ಕೆ ಇಸ್ರೋದಿಂದ ಸ್ಪೇಸ್ ಸ್ಟೇಷನ್, 2040ಕ್ಕೆ ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿಯೇ ಇಳಿದು ಸಂಶೋಧನೆ ಮಾಡುವಂತಹ ಯೋಜನೆಗಳನ್ನು ಇಸ್ರೋ ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ. ಇಷ್ಟೆಲ್ಲ ಸಾಧನೆ ಮಾಡಲು ಯುವಕರ ಸಹಕಾರ
ಬೇಕಾಗುತ್ತದೆ. ವಿದ್ಯಾರ್ಥಿಗಳು ನವೋದ್ಯಮದಲ್ಲಿ ತೊಡಗಿಸಿಕೊಂಡು ರಾಷ್ಟ್ರಕ್ಕಾಗಿ ಕೆಲಸ ಮಾಡುವಂತೆ ತಿಳಿಸಿದರು.
ಯುವಕರು ತಮ್ಮದೇ ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಒಂದು ಬಾರಿ ತೊಡಸಿಗಿಕೊಂಡ ಬಳಿಕ ಕಠಿಣ ಪರಿಶ್ರಮದಿಂದ ದುಡಿಯುವತ್ತ ಗಮನಹರಿಸಿ. ನವೀನ ವಿನ್ಯಾಸಗಳು ಹಾಗೂ ಕ್ರೇಜಿ ಐಡಿಯಾಗಳನ್ನು ಹುಡುಕಲು ಚಿಂತನೆ ಮಾಡಿ. ಈ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದರು.
ಇಸ್ರೋ ಪ್ರೊ.ಡಾ. ಪಿ.ಜಿ.ದಿವಾಕರ್ ಮಾತನಾಡಿ, ಪ್ರಸ್ತುತ ಇಸ್ರೋ ಮಾಡುತ್ತಿರುವ ಕೆಲಸವನ್ನೇ ನವೋದ್ಯಮ, ಎಂಎಸ್‌ಎಂಇ ಮತ್ತು ಇನ್‌ಕ್ವಿಬೇಷನ್ ಕೇಂದ್ರಗಳು ಮಾಡುತ್ತಿರುವುದರಂದ ಅವಕಾಶಗಳು ಜಾಸ್ತಿಯಾಗಿವೆ. ಆದ್ದರಿಂದ ಪದವಿ ಬಳಿಕ ಎಲ್ಲರೂ ಇಸ್ರೋದಲ್ಲಿ ಸೇರಬೇಕೆಂದಿಲ್ಲ. ಇಸ್ರೋದಂತಹ ಕಂನಿಗಳಲ್ಲಿ ಕೆಲಸ ಪಡೆಯಬಹುದಾಗಿದೆ ಎಂದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾಕೋತ್ತರ ಸೇರಿ 800 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಎಂಸಿ ಕಾಲೇಜಿನ ಅಧ್ಯಕ್ಷ ಡಾ.ಕೆ.ಆರ್.ಪರಮಂಸ, ಉಪಾಧ್ಯಕ್ಷೆ ಕೆ.ಗೀತಾ ಪರಮಹಂಸ, ಕಾರ್ಯಕಾರಿ ಉಪಾಧ್ಯಕ್ಷ ರಾಹುಲ್ ಕಲ್ಲೂರಿ , ಶೈಕ್ಷಣಿಕ ಸಲಹೆಗಾರ ಡಾ.ಆರ್. ನಾಗರಾಜ್, ಪ್ರಾಂಶುಪಾಲ ಡಾ.ಕೆ.ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net