

ಬಳ್ಳಾರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಆಯೋಜನೆ ಮಾಡಿದ್ದ ಪಾದಯಾತ್ರೆಗೆ ತೆರಳಿದ್ದ ವ್ಯಕ್ತಿ ಅನಾಥ ಶವವಾಗಿ ಪತ್ತೆಯಾಗಿದ್ದ. ಅಂಥದ್ದೇ ಒಂದು ಪ್ರಕರಣ ಇದೀಗ ಬಿಜೆಪಿ ಸಮಾವೇಶ ಸಂದರ್ಭದಲ್ಲಿ ಸಂಭವಿಸಿದೆ. ಬಿಜೆಪಿಯ ಎಸ್ಸಿ-ಎಸ್ಟಿ ಸಮಾವೇಶಕ್ಕೆ ಬಂದಿದ್ದ ಯುವಕನೊಬ್ಬ ನೀರುಪಾಲಾಗಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರಿ ತಾಲೂಕಿನ ಗೌರಿಪುರ ಗ್ರಾಮದ ಉಮಾಪತಿ (26) ಸಾವಿಗೀಡಾದ ಯುವಕ. ಬಳ್ಳಾರಿಯಲ್ಲಿ ನಡೆದ ಬಿಜೆಪಿಯ ಎಸ್ಸಿ-ಎಸ್ಟಿ ಸಮಾವೇಶಕ್ಕೆ ಬಂದಿದ್ದ ಈತ, ವೇದಿಕೆಯ ಹಿಂಭಾಗದ ಬಳಿ ಇರುವ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಇಲ್ಲಿನ ಗೌತಮನಗರ ಸಮೀಪದ ಹೆಚ್ಎಲ್ಸಿ ಕಾಲುವೆಯಲ್ಲಿ ಕಾಲು ತೊಳೆದುಕೊಳ್ಳುವಾಗ ಆಯತಪ್ಪಿ ಬಿದ್ದಿದ್ದಾನೆ. ಕಾಲುವೆಯಲ್ಲಿ ಬಿದ್ದಿರುವ ಈತ ಕಾಣದಂತಾಗಿದ್ದು, ಯುವಕನ ಶವಕ್ಕಾಗಿ ಹುಡುಕಾಟ ಆರಂಭವಾಗಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.