

ನವದೆಹಲಿ: ದೇಶದ 71ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ರಾಷ್ಟ್ರದ ಜನರಿಗೆ ಶುಭಾಶಯ ಕೋರಿದರು.
ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಸಂವಿಧಾನ ಈ ದೇಶದ ಜನರಿಗೆ ಹಕ್ಕುಗಳನ್ನು ನೀಡಿದೆ. ಹಾಗೇ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳ ಮೂಲಕ ಎಲ್ಲರನ್ನೂ ಬೆಸೆದಿದೆ ಎಂದು ಹೇಳಿದರು.
ನಾವು ಈ ದೇಶದ ಪಿತಾಮಹ ಮಹಾತ್ಮ ಗಾಂಧೀಜಿಯವರ ಮೌಲ್ಯಗಳು, ಸಿದ್ಧಾಂತಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಸಂವಿಧಾನವನ್ನೂ ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಈ ಮೂಲಕ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಗೆ ಅರ್ಥಪೂರ್ಣ ಆಯಾಮ ನೀಡಬಹುದು ಎಂದು ಹೇಳಿದರು.
ನಮ್ಮ ರಾಷ್ಟ್ರ ಯಾವತ್ತೂ ಯುವಕರಿಗೆ ಮೊದಲ ಆಧ್ಯತೆ ನೀಡುತ್ತದೆ. ನವಭಾರತದ ಉಗಮಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ದೇಶದ ಜನರು, ಅದರಲ್ಲೂ ಮುಖ್ಯವಾಗಿ ಯುವಕರು ಕಾರಣವಿಟ್ಟುಕೊಂಡು ಹೋರಾಟ ಮಾಡಬೇಕು. ಆದರೆ ಗಾಂಧೀಜಿಯವರ ಅಹಿಂಸಾ ತತ್ವವನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಉಲ್ಲೇಖಿಸಿದರು. ಹಾಗೇ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆಗಳನ್ನು ಶ್ಲಾಘಿಸಿದರು. ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾನವ ಸಹಿತ ಗಗನಯಾನದ ಬಗ್ಗೆ ಇಡೀ ರಾಷ್ಟ್ರ ಕುತೂಹಲದಿಂದ ಕಾಯುತ್ತಿದೆ ಎಂದರು. (
ಏಜೆನ್ಸೀಸ್)