

ನವದೆಹಲಿ: ಅಗ್ನಿಸಾಕ್ಷಿಯಾಗಿ ಕೈ ಹಿಡಿಯಬೇಕಿದ್ದ ಜೋಡಿಯೊಂದು ಬೆಂಕಿಗೆ ಬಲಿಯಾಗಿದೆ. ದುರಂತವೆಂದರೆ ಪ್ರಿಯಕರನೇ ಪ್ರೇಯಸಿಗೆ ಬೆಂಕಿ ಹಚ್ಚಿ ತನಗೂ ಕಿಚ್ಚಿಟ್ಟುಕೊಂಡಿದ್ದು, ಕೊನೆಗೆ ಇಬ್ಬರೂ ಸಜೀವದಹನಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲಂಗೋಡ್ ಎಂಬಲ್ಲಿ ಈ ಪ್ರಕರಣದ ನಡೆದಿದ್ದು, ಬಾಲಸುಬ್ರಮಣಿಯನ್ (23) ಮತ್ತು ಆತನ ಪ್ರೇಯಸಿ ಸಾವಿಗೀಡಾದವರು. ಈತ 16 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದು, ಇದು ಎರಡೂ ಕಡೆಯವರಿಗೂ ಹಾಗೂ ಸ್ಥಳೀಯರಿಗೂ ತಿಳಿದಿತ್ತು. ಆದರೆ ಯುವತಿಯ ಕಡೆಯವರು ಇದಕ್ಕೆ ಆಕ್ಷೇಪ ಹೊಂದಿದ್ತು, ಆತನೊಂದಿಗೆ ಮಾತನಾಡದಂತೆ, ನೋಡದಂತೆ ಅವಳಿಗೆ ತಾಕೀತು ಮಾಡಿದ್ದರು.
ಆದಾಗ್ಯೂ ಆಕೆಗೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆ ಮದುವೆಯಾಗುವ ಉದ್ದೇಶ ಹೊಂದಿದ್ದ ಬಾಲಸುಬ್ರಮಣಿಯನ್, ಭಾನುವಾರ ತನ್ನ ಪ್ರೇಯಸಿಯನ್ನು ಮನೆಗೆ ಆಹ್ವಾನಿಸಿದ್ದ. ನಂತರ ಆಕೆಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡಿದ್ದ. ಕೊಠಡಿಯಲ್ಲಿ ಹೊಗೆ ತುಂಬಿ ವಾಸನೆ ಬರುತ್ತಿದ್ದಂತೆ ವಿಷಯ ಗೊತ್ತಾಗಿ ಆತನ ತಾಯಿ ತಕ್ಷಣ ಸ್ಥಳೀಯರ ಸಹಾಯದಿಂದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದರೂ ಇಬ್ಬರೂ ಸಾವಿಗೀಡಾಗಿದ್ದಾರೆ.