ಕಾರ್ಯವೈಖರಿ ಪರಿಚಯಿಸಲು ಯುವ ಸಂಸತ್ ಸಹಕಾರಿ

samsat
ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಕೆ.ಆರ್.ಸುಜಾತಾ ಉದ್ಘಾಟಿಸಿದರು. ಜ್ಯೋತಿಕುಮಾರಿ, ಸುರೇಶ್, ಗಂಗಾ ನಾಯ್ಕ, ಎಲ್.ಜ್ಯೋತಿ ಇದ್ದರು.
Published on

ಶಿವಮೊಗ್ಗ: ಸಂಸತ್ ಕಾರ್ಯವೈಖರಿ, ಸಂಸದರ ಜವಾಬ್ದಾರಿಗಳು, ಶಾಸಕಾಂಗದ ಹೊಣೆಗಾರಿಕೆ ಮುಂತಾದ ಮಾಹಿತಿ ತಿಳಿದುಕೊಳ್ಳಲು ಯುವ ಸಂಸತ್ ಸಹಕಾರಿ ಎಂದು ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ ಅಭಿಪ್ರಾಯಪಟ್ಟರು.

ಶಿಕ್ಷಣ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಜಿಲ್ಲಾಡಳಿತದ ಸಹಯೋಗದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಸಂಸತ್‌ನಲ್ಲಿ ಜನಪ್ರತಿನಿಧಿಗಳು ಹೇಗೆ ವಿಷಯ ಮಂಡನೆ ಮಾಡುತ್ತಾರೆ ಎಂಬುದನ್ನು ವಿದ್ಯಾರ್ಥಿಗಳು ಈ ಮೂಲಕ ಅರಿತುಕೊಳ್ಳಬಹುದು ಎಂದು ತಿಳಿಸಿದರು.

ಯುವ ಸಂಸತ್ ಕಾರ್ಯಕ್ರಮ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತದೆ. ಜನಪ್ರತಿನಿಧಿಗಳು ವಿಷಯ ಪ್ರಸ್ತಾಪಿಸುವ ರೀತಿ, ಆಡಳಿತ ಹಾಗೂ ಪ್ರತಿಪಕ್ಷಗಳ ಜವಾಬ್ದಾರಿ, ಸ್ಪೀಕರ್ ಸದನದ ಕಲಾಪ ನಿರ್ವಹಿಸುವ ರೀತಿ ವಿದ್ಯಾರ್ಥಿಗಳಿಗೆ ಅರಿವಾಗುತ್ತದೆ ಎಂದರು.

ಸಂಸತ್ ಕಲಾಪ ವೀಕ್ಷಿಸುವುದು, ಅದರ ಬಗ್ಗೆ ಓದಿ ತಿಳಿದುಕೊಳ್ಳುವುದಕ್ಕಿಂತ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳೇ ಕಲಾಪದಲ್ಲಿ ಭಾಗವಹಿಸಿದಾಗ ವಿಶೇಷ ಅನುಭವ ದೊರೆಯುತ್ತದೆ. ಜತೆಗೆ ಸ್ಪರ್ಧಾ ಭಾವನೆ ಮೂಡಿಸುತ್ತದೆ ಎಂದು ಹೇಳಿದರು.

ಡಿಡಿಪಿಐ ಕಚೇರಿ ಬಿಇಒ ಎಲ್.ಜ್ಯೋತಿ ಮಾತನಾಡಿ, ಯುವ ಸಂಸತ್ ಸ್ಪರ್ಧೆ ನಾಲ್ಕು ಹಂತದಲ್ಲಿ ನಡೆಯುತ್ತದೆ. ತಾಲೂಕು ಹಂತದಲ್ಲಿ ವಿಜೇತರಾದ ಐದು ವಿದ್ಯಾರ್ಥಿಗಳನ್ನು ಜಿಲ್ಲಾ ಹಂತಕ್ಕೆ ಕಳಿಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ಉತ್ತಮ ಸಾಧನೆ ತೋರಿದ ಮೂವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಸಾಹಿತ್ಯ, ಕ್ರೀಡೆ, ವಿಜ್ಞಾನ ಅರಿಯುವುದರ ಜತೆಗೆ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಬೇಕು ಎಂಬುದು ಮುಖ್ಯ ಉದ್ದೇಶ ಎಂದು ತಿಳಿಸಿದರು.

ಡಿಡಿಪಿಐ ಕಚೇರಿ ವಿಷಯ ಪರೀವೀಕ್ಷಕಿ ಜ್ಯೋತಿಕುಮಾರಿ, ಸಂಪನ್ಮೂಲ ಶಿಕ್ಷಕರಾದ ಗಂಗಾ ನಾಯ್ಕ, ಸುರೇಶ್, ಸತೀಶ್‌ಕುಮಾರ್, ಹಸನ್ ಸಾಬ್ ಉಪಸ್ಥಿತರಿದ್ದರು.

ಸಾಗರ ಸುಭಾಷ್ ನಗರ ಸರ್ಕಾರಿ ಪ್ರೌಢಶಾಲೆಯ ಭೂದೇವಿ ಪ್ರಥಮ, ಹೊಸನಗರದ ಮಸಗಲ್ಲಿ ಸರ್ಕಾರಿ ಪ್ರೌಢಶಾಲೆಯ ಕೆ.ಎನ್.ಸ್ಫೂರ್ತಿ ದ್ವಿತೀಯ ಹಾಗೂ ಕೆ.ಪಿ.ಪೂರ್ಣಿಮಾ ತೃತೀಯ ಬಹುಮಾನ ಪಡೆದು ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net