

ಸಾಗರ: ಸಂಗೀತ, ನೃತ್ಯ ಕಾರ್ಯಕ್ರಮಗಳು ಸಮಾಜವನ್ನು ಆರೋಗ್ಯಪೂರ್ಣವಾಗಿಸುತ್ತದೆ. ಸಂಗೀತವು ದುಗುಡವನ್ನು ದೂರ ಮಾಡಿ ಮಾನಸಿಕ ನೆಮ್ಮದಿ ನೀಡುತ್ತದೆ. ಹಾಗಾಗಿ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮಹತ್ವದ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕು ಎಂದು ವಿದ್ವಾನ್ ಆನೂರು ಆರ್.ಅನಂತಕೃಷ್ಣ ಶರ್ಮ ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ಪರಿಣಿತಿ ಕಲಾಕೇಂದ್ರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಏರ್ಪಡಿಸಿದ್ದ ಪರಿಣಿತಿ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಷ್ಟ್ರಮಟ್ಟದ ಕಲಾವಿದರು ಪ್ರದರ್ಶನ ನೀಡುವ ವೇಳೆ ಸ್ಥಳೀಯವಾಗಿ ಕಲಿತುಕೊಳ್ಳುವ ಜತೆಗೆ ವಿವಿಧ ಕೌಶಲ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪರಿಣಿತಿ ಕಲಾಕೇಂದ್ರ ಹತ್ತು ವರ್ಷಗಳಿಂದ ರಾಷ್ಟ್ರೀಯ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದ ಸಂಗತಿ. ಕಲೆಗೆ ಸಿದ್ಧಿ ಬಹಳ ಮುಖ್ಯ. ಇದನ್ನು ಗಳಿಸಬೇಕು ಎಂದರೆ ಅದರಲ್ಲಿ ನಿರಂತರತೆ ಇರಬೇಕು. ಪ್ರಸಿದ್ಧಿಗಿಂತ ಪಕ್ವತೆ ಮುಖ್ಯ ಎಂದು ತಿಳಿಸಿದರು.
ಕಲೆ ವಿನಿಮಯಕ್ಕೆ ಸಹಕಾರಿ: ರಾಷ್ಟ್ರೀಯ ಉತ್ಸವಗಳು ದೊಡ್ಡ ನಗರಗಳಲ್ಲಿ ಮಾತ್ರ ನಡೆಯುತ್ತಿತ್ತು. ತಾಲೂಕಿನ ಕೇಂದ್ರಗಳಲ್ಲೂ ಆಯೋಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಿದೆ ಎಂದು ಪರಿಣಿತಿ ಕಲಾಕೇಂದ್ರದ ಮುಖ್ಯಸ್ಥ ವಿದ್ವಾನ್ ಗೋಪಾಲ್ ಹೇಳಿದರು. ಕಲಾವಿದರು ಇತರ ಕಲಾವಿದರ ಕಾರ್ಯಕ್ರಮಗಳನ್ನು ನೋಡುವ ಮೂಲಕ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಪ್ರಸಿದ್ಧ ಕಲಾವಿದರನ್ನು ಸಾಗರಕ್ಕೆ ಕರೆಯಿಸಿ, ಅವರ ಕಾರ್ಯಕ್ರಮಗಳನ್ನು ನೋಡುವ, ಕಲೆ-ಕಲಾವಿದರ ವಿನಿಮಯ ಮತ್ತು ಸಂವಹನಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.
ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಮಾತನಾಡಿ, ಹೊರ ರಾಜ್ಯದಿಂದ ಬಂದ ಕಲಾವಿದರಿಗೆ ನಾವು ಗೌರವ ಕೊಡುವ ಜತೆಗೆ ಅವರ ಕಲೆಯನ್ನು ಆಸ್ವಾದಿಸಬೇಕು. ಸಾಗರದಲ್ಲಿ ನಡೆಯುವ ಇಂತಹ ಸಂಗೀತ ನೃತ್ಯೋತ್ಸವಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಶುಂಠಿ ಸತ್ಯನಾರಾಯಣ ಭಟ್, ಗಜೇಂದ್ರ ಸಾಗರ್, ಕೃಷ್ಣಮೂರ್ತಿ ಆಚಾರ್ ಮತ್ತು ಪ್ರೊ. ಕೆ.ಆರ್.ಕೃಷ್ಣಯ್ಯ ಅವರಿಗೆ ಪರಿಣಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಂಜಾಬಿನ ಬಾಂಗ್ರಾ ನೃತ್ಯ, ಗುಜರಾತ್‌ನ ರಾತ್ವ ನೃತ್ಯ, ಬೆಂಗಳೂರಿನ ಸುಮನ್ ನಾಗೇಶ್ ತಂಡದಿಂದ ಭರತನಾಟ್ಯ, ವಿದ್ವಾನ್ ಅನಂತಕೃಷ್ಣ ಶರ್ಮ ಅವರ ತಂಡದಿಂದ ಲಯ ಲಾವಣ್ಯ ಪ್ರದರ್ಶನಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಟಿ.ಡಿ.ಪಾಂಡುರಂಗ, ಕೆ.ಸಿದ್ದಪ್ಪ, ವಿಠ್ಠಲ್ ಪೈ, ಸುಂದರ್ ಭಾಸ್ಕರ್, ಸೋಮಶೇಖರ್, ಮ.ಸ.ನಂಜುಂಡಸ್ವಾಮಿ, ಮಾಧವ ಭಟ್, ಮಮತಾ ರಾಜಕುಮಾರ್ ಇತರರಿದ್ದರು.