

ಶಿವಮೊಗ್ಗ: ಯುವಕರು ಭವ್ಯ ಭಾರತ ದೇಶದ ಭವಿಷ್ಯ. ಅವರು ಸದೃಢವಾಗಿದ್ದರೆ ದೇಶವು ಸದೃಢವಾಗಿರುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2025-26ನೇ ಸಾಲಿನ ಶಿವಮೊಗ್ಗ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯನ್ನು ಬದುಕಿನಲ್ಲಿ ಅಳಡಿಸಿಕೊಳ್ಳಬೇಕು. ಆ ಮೂಲಕ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿ ಈ ದೇಶಕ್ಕೆ ಗೌರವ ತರುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎನ್.ಚನ್ನಬಸಪ್ಪ, ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಗುಣದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ತಲುಪಬೇಕು. ಆರೋಗ್ಯಕರ ಬದುಕಿಗೆ ಕ್ರೀಡೆ ಅತ್ಯವಶ್ಯಕ. ಯುವಕರು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಇದರಿಂದ ದೇಹ ಮತ್ತು ಮನಸ್ಸು ಸದೃಢವಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡೆ ಹಾಗೂ ನಿಯಮಿತವಾದ ವ್ಯಾಯಾಮ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಎಚ್.ಮಾಲತೇಶ್ ಹಾಗೂ ವಿವಿಧ ಶಾಲಾ, ಕಾಲೇಜುಗಳ ಕ್ರೀಡಾಪಟುಗಳು ಇದ್ದರು.