

ಶಿವಮೊಗ್ಗ: ಕರೊನಾ, ಲಾಕ್‌ಡೌನ್‌ನಿಂದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ವಿಪತ್ತು ಪರಿಸ್ಥಿತಿಯಲ್ಲಿ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ ನಿರ್ದಯವಾಗಿ ವಿದ್ಯುತ್ ಶುಲ್ಕ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಿದೆ. ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನೀಡಿರುವ ಕಾರಣಗಳು ಜನರನ್ನು ತಪ್ಪುದಾರಿಗೆ ಎಳೆಯುವಂತಿದೆ. ವಿದ್ಯುತ್ ಸರಬರಾಜು ಕಂಪನಿಗಳು ಇಂದು ನಷ್ಟದಲ್ಲಿದ್ದರೆ ಅದಕ್ಕೆ ರಾಜ್ಯ ಸರ್ಕಾರದ ಅದಕ್ಷತೆ, ಭ್ರಷ್ಟಾಚಾರ ಮತ್ತು ಕಾರ್ಪೋರೇಟ್ ಕಂಪನಿಗಳ ಓಲೈಕೆ ಕಾರಣ ಎಂದು ದೂರಿದರು.
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ವಿದ್ಯುತ್ ಸುಧಾರಣೆ ಮತ್ತು ಕಾರ್ಯಗತಗೊಳಿಸಿದ ಹೊಸ ಯೋಜನೆಗಳಿಂದ ರಾಜ್ಯ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿತ್ತು. ರಾಜ್ಯದಲ್ಲಿ 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ವಿದ್ಯುತ್ ಬಳಕೆ ಆಗುತ್ತಿರುವುದು ಕೇವಲ 8.5 ಸಾವಿರದಿಂದ 10 ಸಾವಿರ ಮೆಗಾವ್ಯಾಟ್ ಮಾತ್ರ. ಒಟ್ಟು ವಿದ್ಯುತ್ ಉತ್ಪಾದನೆಯ 3ನೇ ಎರಡು ಭಾಗದಷ್ಟು ಸೋಲಾರ್ ಮತ್ತು ಗಾಳಿಯ ಮೂಲದಿಂದ ಇಂಧನ ಲಭ್ಯವಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ರಾಯಚೂರು ಉಷ್ಣವಿದ್ಯುತ್ ಸ್ಥಾವರದ ಉತ್ಪಾದನೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಹೀಗಿರುವಾಗ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್, ಮುಖಂಡರಾದ ಬಿ.ಲೋಕೇಶ್, ಎಸ್.ಕುಮರೇಶ್, ಈ.ಟಿ.ನಿತಿನ್, ಆರ್.ಕಿರಣ್, ಟಿವಿ ರಂಜಿತ್, ಪದಾಧಿಕಾರಿಗಳಾದ ಆರ್.ಮಸ್ತಾನ್,ಎಂ.ರಾಹುಲ್, ನಿಖಿಲ್, ಗಗನ್ ಗೌಡ, ರಾಹುಲ್ ಸೀಗೆಹಟ್ಟಿ, ದೇವರಾಜ್, ಶ್ರೀನಿವಾಸ್, ಪ್ರದೀಪ್, ಇರ್ಫಾನ್, ಮಂಜು, ನವೀನ್, ಚೇತನ್, ವಿನಯ್ ಇದ್ದರು.