

ರಾಣೆಬೆನ್ನೂರು: ಮೊಸರು ತರಲು ಹೋದ ಯುವಕನೊಬ್ಬ ಬೈಕ್ನಿಂದ ಬಿದ್ದು ಮೃತಪಟ್ಟ ಘಟನೆಗೆ ಸಂಬಂಧಿಸಿ ಮೃತನ ಸಂಬಂಧಿಕರು ಇದು ಕೊಲೆ ಎಂದು ಆರೋಪಿಸಿ ನಾಲ್ವರ ವಿರುದ್ಧ ತಾಲೂಕಿನ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ಕರೂರ ಗ್ರಾಮದ ದರ್ಶನ ಚಂದ್ರಪ್ಪ ಆಲದಕಟ್ಟಿ (19) ಮೃತ ಯುವಕ.
ಪ್ರಕರಣಕ್ಕೆ ಸಂಬಂಧಿಸಿ ಶರತ ನಾಗರಾಜ ಸೂರ್ವೇ, ನಾಗರಾಜ ಶೇಖಪ್ಪ ಸೂರ್ವೇ, ಗಂಗಮ್ಮ ನಾಗರಾಜ ಸೂರ್ವೇ, ಭರತ ನಾಗರಾಜ ಸೂರ್ವೇ ಎಂಬುವರ ವಿರುದ್ಧ ದೂರು ದಾಖಲಾಗಿರುವುದು. ಇವರ ವಿರುದ್ಧ ದೂರು ನೀಡಿರುವ ಮೃತನ ತಾಯಿ ಬಸಮ್ಮ "ಆರೋಪಿಗಳು ನನ್ನ ಮಗನಿಗೆ 70 ಸಾವಿರ ರೂ. ಸಾಲ ನೀಡಿದ್ದರು. ಅದನ್ನು ತೀರಿಸಿ ನನ್ನ ಮಗನಿಗೆ ಸಾಲ ಕೊಡಬೇಡಿ ಹಾಗೂ ಆತನನ್ನು ಕರೆದುಕೊಂಡು ಹೋಗಬೇಡಿ ಎಂದು ಹೇಳಿದ್ದೆ. ಆದರೆ, 1ನೇ ಆರೋಪಿ ಶರತ ಮತ್ತೇ ನನ್ನ ಮಗನನ್ನು ಕರೆದುಕೊಂಡು ಹೋಗುತ್ತಿದ್ದ. ಇದರಿಂದ ಅವರ ಮನೆಗೆ ಕೇಳಲು ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ನಿನ್ನ ಮಗ ನಮ್ಮ ಬಳಿ ಸಾಲ ಮಾಡಿದ್ದಾನೆ ಎಂದು ಬೈದು ಕಳುಹಿಸಿದ್ದರು.
ಆದರೆ, ಅದೇ ದಿನ ಸಂಜೆ ನನ್ನ ಮಗ ಮನೆಗೆ ಬಂದು ಮೊಸರು ತರುವ ಸಲುವಾಗಿ ಹೋದಾಗ ಬೈಕ್ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂಬ ಸುದ್ದಿ ತಿಳಿದು ಬಂದಿತ್ತು. ನಾವು ಸ್ಥಳಕ್ಕೆ ಹೋಗಿ ನೋಡಿದಾಗ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಆದ್ದರಿಂದ ಇದೊಂದು ಕೊಲೆಯಾಗಿದ್ದು ತನಿಖೆ ನಡೆಸಬೇಕು' ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.