ಮಾರಕಾಸ್ತ್ರಗಳಿಂದ ಹೊಡೆದು ಯುವಕನ ಹತ್ಯೆ

Published on

ಮಳವಳ್ಳಿ : ತಾಲೂಕಿನ ರಾಮಂದೂರು ಗ್ರಾಮದ ಬಳಿ ಮಂಗಳವಾರ ರಾತ್ರಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ.

ತಾಲೂಕಿನ ಕಲ್ಕುಣಿ ಗ್ರಾಮದ ಶಿವಸ್ವಾಮಿ ಪುತ್ರ ಮಂಜು( 21) ಮೃತ ಯುವಕ .ರಾಮಂದೂರು ಕೆರೆಯಲ್ಲಿ ಮೀನು ಹಿಡಿಯುವ ಸಲುವಾಗಿ ಬಲೆ ಬಿಡಲು ತನ್ನ ಆಟೋದಲ್ಲಿ ಬಲೆ ಇನ್ನಿತರ ಪರಿಕರಗಳ ಸಮೇತ ಪುಟ್ಟಸ್ವಾಮಿ ಅವರ ಜತೆ ತೆರಳಿದ್ದು, ಕೆರೆಯಲ್ಲಿ ಬಲೆ ಬಿಟ್ಟು ಆಟೋದಲ್ಲಿ ಒಬ್ಬನೇ ಸ್ವಗ್ರಾಮಕ್ಕೆ ಹಿಂದಿರುಗುವ ವೇಳೆ ದುಷ್ಕರ್ಮಿಗಳು ಮಂಜು ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ಯುವಕನ ಜತೆಯಲ್ಲಿ ಬಂದಿದ್ದ ಕಲ್ಕುಣಿ ಗ್ರಾಮದ ಪುಟ್ಟಸ್ವಾಮಿ ಸ್ವಲ್ಪ ಸಮಯದ ನಂತರ ಬೈಕ್ ನಲ್ಲಿ ಬರುತ್ತಿದ್ದಾಗ ರಸ್ತೆ ಬದಿಯ ಹಳ್ಳವೊಂದರಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಂಜು ಶವವನ್ನು ಕಂಡು ಮನೆಯವರಿಗೆ ವಿಚಾರ ಮುಟ್ಟಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಮೃತನ ತಂದೆ ಶಿವಸ್ವಾಮಿ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ತಮ್ಮ ಪುತ್ರನನ್ನು ಕೊಲೆ ಮಾಡಿರುವುದಾಗಿ ದೂರು ದಾಖಲಿಸಿದ್ದು, ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ , ಸಿಪಿಐ ಶ್ರೀಧರ್, ಪಿಎಸ್‌ಐ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net