

ಸಾಗರ: ಯುವಜನರು ದೇಶೀಯ ಕ್ರೀಡೆಗಳಿಂದ ವಿಮುಖರಾಗುತ್ತಿದ್ದಾರೆ. ಕುಸ್ತಿಯಂಥ ಕ್ರೀಡೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಶನಿವಾರ ಗಾಂಧಿನಗರ ಯುವಜನ ಸಂಘ ಏರ್ಪಡಿಸಿದ್ದ 49ನೇ ರಾಷ್ಟ್ರ ಮಟ್ಟದ ದಸರಾ ಕುಸ್ತಿ ಉದ್ಘಾಟಿಸಿ ಮಾತನಾಡಿದರು.
ದೇಶದ ವಿವಿಧೆಡೆಯಿಂದ ಕುಸ್ತಿಪಟುಗಳು ಪ್ರತಿ ವರ್ಷ ಆಗಮಿಸುತ್ತಾರೆ. ಮುಖ್ಯವಾಗಿ ಪ್ರತಿ ವರ್ಷ ಮಹಿಳಾ ಕುಸ್ತಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ದೇಶೀಯ ಕ್ರೀಡೆಗಳ ಮಹತ್ವ ಕಡಿಮೆಯಾಗುತ್ತಿದೆ. ಹಬ್ಬ ಮತ್ತು ಜಾತ್ರೆಗಳ ಸಂದರ್ಭ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುತ್ತದೆ. ಮಾರಿಕಾಂಬೆ ಜಾತ್ರೆ ವೇಳೆ ಕುಸ್ತಿ ಸ್ಪರ್ಧೆ ನಡೆಸಿಕೊಂಡು ಬಂದಿದ್ದಾರೆ ಎಂದರು.
ಒಂದು ಕಾಲದಲ್ಲಿ ಪ್ರತಿ ಊರಿನಲ್ಲಿಯೂ ಗರಡಿ ಮನೆಗಳು ಇರುತ್ತಿದ್ದವು. ಈಗ ಅವೆಲ್ಲವೂ ಮುಚ್ಚುವ ಹಂತ ತಲುಪಿದೆ. ಮಲೆನಾಡಿಗೆ ಹೋಲಿಸಿದರೆ ಬಯಲು ಸೀಮೆಯಲ್ಲಿ ಕುಸ್ತಿ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯ ಇಂದಿಗೂ ಇದೆ. ಸಾಗರದ ಗಾಂಧಿನಗರ ಯುವ ಜನ ಸಂಘ, ದಾನಿಗಳು, ಕ್ರೀಡಾ ಪ್ರೇಮಿಗಳ ಸಹಕಾರದಲ್ಲಿ ಕಳೆದ 49ವರ್ಷಗಳಿಂದ ನಿರಂತರವಾಗಿ ಕುಸ್ತಿ ಆಯೋಜಿಸುತ್ತಿರುವುದು ವಿಶೇಷ ಎಂದರು.
ಯುವಜನ ಸಂಘದ ಅಧ್ಯಕ್ಷ ಕೆ.ಜಿ.ಸಂತೋಷ್, ಸಂಘ 49 ವರ್ಷಗಳ ಕಾಲ ಸದೃಢವಾಗಿ ಬೆಳೆದಿದೆ. ಇದರಲ್ಲಿ ಸಂಘದ ಹಿರಿಯರ, ಪದಾಧಿಕಾರಿಗಳ, ಸಾರ್ವಜನಿಕರ ಸಹಕಾರ ಮತ್ತು ಮಾರ್ಗದರ್ಶನ ಇದೆ. ಪಂಜಾಬ್, ನವದೆಹಲಿ ಮತ್ತಿತರ ರಾಜ್ಯಗಳ ಕುಸ್ತಿಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ವರ್ಷ ಸಂಸ್ಥೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇನ್ನಷ್ಟು ಅರ್ಥಪೂರ್ಣ ಕಾರ್ಯಕ್ರಮ ನಡೆಸುವುದಾಗಿ ತಿಳಿಸಿದರು.
ನಗರಸಭೆ ಸದಸ್ಯೆ ಮಧುಮಾಲತಿ, ಸಮಿತಿ ಸಂಚಾಲಕ ಸಂತೋಷ್ ಮಹಿಳಾ ಕುಸ್ತಿಗೆ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಆರ್.ಶ್ರೀನಿವಾಸ್, ಪ್ರಮುಖರಾದ ಕೆ.ಸಿದ್ದಪ್ಪ, ಕೆ.ಜಿ.ಪ್ರಸನ್ನ, ಎಚ್.ಆರ್.ಶ್ರೀಧರ್, ಕಲಸೆ ಚಂದ್ರಪ್ಪ, ಧರ್ಮರಾಜ್, ರವಿ, ಎಂ.ಎನ್.ಪ್ರಕಾಶ್, ಮಲ್ಲಿಕಾರ್ಜುನ, ರಾಮಪ್ಪ, ವೆಂಕಟೇಶ್, ದಿನೇಶ್ ಗೌಡ ಇತರರಿದ್ದರು.