ಹಾಸ್ಯನಟಿ ವಿರುದ್ಧ ಅವಾಚ್ಯವಾಗಿ ನಿಂದಿಸಿ, ರೇಪ್​ ಮಾಡುವ ಬೆದರಿಕೆ ಹಾಕಿದ್ದವ ಸಿಕ್ಕಿಬಿದ್ದ

rape threat
Published on

ನವದೆಹಲಿ: ಹಾಸ್ಯನಟಿ ಒಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಹರಿಬಿಟ್ಟಿದ್ದವ ಸಿಕ್ಕಿಬಿದ್ದಿದ್ದಾನೆ.

ಗುಜರಾತ್​ನ ವಡೋದರದ ನಿವಾಸಿ ಶುಭಂ ಮಿಶ್ರಾ (26) ಬಂಧಿತ. ಹಾಸ್ಯ ನಟಿ ಅಗ್ರಿಮಾ ಜೋಸುಹಾ ಅವರನ್ನು ಈತ ನಿಂದಿಸಿ, ರೇಪ್​ ಮಾಡುವುದಾಗಿ ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ರಿಮಾ ಜೋಸುಹಾ ಅವರು ಒಂದು ವರ್ಷದ ಹಿಂದೆ ಮರಾಠ ದೊರೆ ಶಿವಾಜಿ ಮಹಾರಾಜ ವಿರುದ್ಧ ತಮಾಷೆ ಮಾಡಿ ಒಂದು ವಿಡಿಯೋ ಹರಿಬಿಟ್ಟಿದ್ದರು. ಇದನ್ನು ನೋಡಿದ ಶುಭಂ ಮಿಶ್ರಾ ಕುಪಿತನಾಗಿ ಅಗ್ರಿಮಾ ಜೋಸುಹಾ ಅವರನ್ನು ಅವಾಚ್ಯವಾಗಿ ನಿಂದಿಸಿ, ರೇಪ್ ಬೆದರಿಕೆ ಹಾಕಿ ಆ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗ, ತಪ್ಪಿತಸ್ಥನನ್ನು ತಕ್ಷಣವೇ ಬಂಧಿಸಿ, ವಿಚಾರಣೆಗೆ ಒಳಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದರು. ಇದನ್ನು ಆಧರಿಸಿ ವಡೋದರ ಪೊಲೀಸರು ಸ್ವಪ್ರೇರಣೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಇದೀಗ ಶುಭಂ ಮಿಶ್ರಾನನ್ನು ಬಂಧಿಸಿದ್ದೇವೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದು, ಭಾರತೀಯ ದಂಡಸಂಹಿತೆ ಮತ್ತು ಐಟಿ ಕಾಯ್ದೆಯಡಿ ಈಗಾಗಲೆ ಆತನ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net