

ಬೆಂಗಳೂರು: ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದ ಮೇಲೆ ಯುವಕನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢ ಮೂಲದ ಶುಭಾಂಶು ಶುಕ್ಲಾ (26) ಬಂಧಿತ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಮೇ 7ರಂದು ಭಾರತೀಯ ರಕ್ಷಣಾ ಪಡೆಗಳು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕೈಗೊಂಡು ಉಗ್ರ ನೆಲೆಗಳನ್ನು ನಾಶಪಡಿಸಿದ್ದವು.
ಭಾರತೀಯ ಸೇನೆಯ ಯಶಸ್ಸನ್ನು 9ರಂದು ಪ್ರಶಾಂತ್ ಲೇಔಟ್‌ನಲ್ಲಿ ಯುವಕರು ಸಂಭ್ರಮಿಸುತ್ತಿದ್ದರು. ಪೇಯಿಂಗ್ ಗೆಸ್ಟ್‌ನ ಬಾಲ್ಕನಿಯಲ್ಲಿ ನಿಂತಿದ್ದ ಶುಭಾಂಶು, ಪಾಕ್ ಪರ ಘೋಷಣೆ ಕೂಗಿದ್ದ. ಗಾಬರಿಗೊಂಡ ಯುವಕರು ಗಮನಿಸಿದಾಗ ಇಬ್ಬರು ಯುವಕರು ಬಾಲ್ಕನಿಯಲ್ಲಿ ನಿಂತು ಕೂಗಿರುವುದು ಗೊತ್ತಾಗಿ ಪೊಲೀಸ್ ಹೆಲ್ಪ್‌ಲೈನ್ 112ಗೆ ದೂರು ನೀಡಿದ್ದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಶುಭಾಂಶು ಶುಕ್ಲಾ ಪಾಕ್ ಪರ ಘೋಷಣೆ ಕೂಗಿರುವುದು ಖಚಿತವಾಗಿದೆ. ಖಾಸಗಿ ಕಂಪನಿಯಲ್ಲಿ ಶುಭಾಂಶು ಉದ್ಯೋಗ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.