

Mallikarjun Kharge: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50 ರಷ್ಟು ಆಮದು ಸುಂಕ ವಿಧಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರ ಹೊಣೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ(ಆಗಸ್ಟ್ 7) ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕೆಂದು ತಿಳಿದಿಲ್ಲ. ಈ ವಿದೇಶಾಂಗ ನೀತಿಯ ವಿಪತ್ತಿಗೆ 70 ವರ್ಷಗಳ ಕಾಲ ಅಡಳಿತ ಮಾಡಿದ ಕಾಂಗ್ರೆಸ್ ಆನ್ನು ದೂಷಿಸಲು ಸಾಧ್ಯವಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಅಮೆರಿಕ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಲ್ಲಿ ಸರ್ಕಾರ ಎಡುವಿದೆ. ಇದಕ್ಕೆ ಮೋದಿಯೇ ಪ್ರಮುಖ ಕಾರಣ ಎಂದು ಖರ್ಗೆ ಆರೋಪಿಸಿದ್ದಾರೆ. ನೀವು ಅಮೆರಿಕ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೀರಿ. ನಿಮಗೆ ಆರು ತಿಂಗಳಿಗಿಂತ ಹೆಚ್ಚು ಸಮಯವಿತ್ತು. ಈಗ ಟ್ರಂಪ್ ನಮ್ಮನ್ನು ಬೆದರಿಸುತ್ತಿದ್ದಾರೆ ಆದರೆ ನೀವು ಸುಮ್ಮನಿದ್ದೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ಟೀಕಾಪ್ರಹಾರ ನಡೆಸಿದ್ದಾರೆ.
ಅಲ್ಲದೆ, 1971ರ ನೌಕಾಪಡೆಯ ಬೆದರಿಕೆಗಳಿಂದ ಹಿಡಿದು ಪರಮಾಣು ಪರೀಕ್ಷೆಗಳ ನಿರ್ಬಂಧಗಳವರೆಗೆ, ನಾವು ಅಮೆರಿಕದೊಂದಿಗಿನ ನಮ್ಮ ಸಂಬಂಧವನ್ನು ಸ್ವಾಭಿಮಾನ ಮತ್ತು ಘನತೆಯಿಂದ ಮುನ್ನಡೆಸಿದ್ದೇವೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರದ ಅಡಳಿತದ ಬಗ್ಗೆ ಖರ್ಗೆ ಬರೆದುಕೊಂಡಿದ್ದಾರೆ.
ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಬುಧವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ಘೋಷಿಸಿದ್ದಾರೆ.(ಏಜೆನ್ಸೀಸ್)