ಭೀಕರ ಅಪಘಾತದಲ್ಲಿ ಯುವತಿ ಸಾವು

accident-15
Published on

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿ ಮೃತಪಟ್ಟು, ಕಾರು ಚಾಲಕ ಗಾಯಗೊಂಡಿದ್ದಾರೆ.

ವಿವೇಕನಗರ ಬಡಾವಣೆಯ ಸಾರಾ ಕ್ಯಾತ್ರಿನ್(೨೨) ಮೃತ ಯುವತಿ. ಕಾರು ಚಾಲಕ ಪ್ರೀತಂ ಕ್ರಿಸ್ಟನ್(೨೪) ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ೧.೩೦ಕ್ಕೆ ಎಎಸ್‌ಸಿ ಸೆಂಟರ್ ದಕ್ಷಿಣ ಗೇಟ್ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಸಾರಾ ಕ್ಯಾತ್ರಿನ್ ಮತ್ತು ಆಕೆಯ ಸ್ನೇಹಿತ ಪ್ರೀತಂ ಕ್ರಿಸ್ಟಿನ್ ಮುಂಜಾನೆ ಕಾರಿನಲ್ಲಿ ಲೋಯರ್ ಅಗರಂ ರಸ್ತೆಯ ಇಂಡಿಯಾ ಗ್ಯಾರೇಜ್ ಜಂಕ್ಷನ್ ಕಡೆಯಿಂದ ವಿವೇಕನಗರದ ಕಡೆಗೆ ಬರುತ್ತಿದ್ದರು. ಈ ವೇಳೆ ಅತಿವೇಗವಾಗಿ ಕಾರು ಚಾಲಾಯಿಸುತ್ತಿದ್ದ ಪ್ರೀತಂ ಕ್ರಿಸ್ಟನ್ ನಿಯಂತ್ರಣ ಕಳೆದುಕೊಂಡು ಎಎಸ್‌ಸಿ ಸೆಂಟರ್ ದಕ್ಷಿಣ ಗೇಟ್ ಬಳಿ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿ ನಂತರ ರಸ್ತೆ ವಿಭಜಕಕ್ಕೆ ಗುದ್ದಿ ಮುಂದೆ ಹೋಗಿ ಮತ್ತೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು ಚಾಲಕನ ಪಕ್ಕದ ಆಸನದಲ್ಲಿ ಕುಳಿತ್ತಿದ್ದ ಸಾರಾ ಕ್ಯಾತ್ರಿನ್ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ಪ್ರೀತಂ ಸಹ ಗಾಯಗೊಂಡಿದ್ದ. ಬಳಿಕ ಸಾರ್ವಜನಿಕರು ಕೂಡಲೇ ಇಬ್ಬರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಸಾರಾ ಕ್ಯಾತ್ರಿನ್ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಚಾಲಕ ಪ್ರೀತಂ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತಿವೇಗ, ನಿರ್ಲಕ್ಷ್ಯದ ಚಾಲನೆಯಿಂದ ಘಟನೆ:

ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಸಂಬಂಧ ಮೃತರಾದ ಸಾರಾ ಕ್ಯಾತ್ರಿನ್ ಸಂಬಂಧಿ ಕಾರು ಚಾಲಕ ಪ್ರೀತಂ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಅಶೋಕನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net