ಮಾದಕ ವಸ್ತುವಿಗೆ ಯುವಕರೇ ಹೆಚ್ಚು ಬಲಿ

id-milad
ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಸಿಪಿಐ ಪಿ.ಪಿ.ಸೋಮೇಗೌಡ ಅವರನ್ನು ಸನ್ಮಾನಿಸಲಾಯಿತು,
Published on

ಮೂಡಿಗೆರೆ: ಮಾದಕ ವಸ್ತುಗಳ ಚಟಕ್ಕೆ ಹೆಚ್ಚಾಗಿ ಯುವಕರು ಬಲಿಯಾಗುತ್ತಿದ್ದಾರೆ. ಯುವಜನರು ದಾರಿ ತಪ್ಪದಂತೆ ಪಾಲಕರು ಎಚ್ಚರ ವಹಿಸುವುದು ಸೂಕ್ತ ಎಂದು ಸಿಪಿಐ ಪಿ.ಪಿ.ಸೋಮೇಗೌಡ ತಿಳಿಸಿದರು.
ಬುಧವಾರ ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ ಏರ್ಪಡಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಠಾಣೆಗೆ ವರ್ಗವಾಗಿ ಬಂದ 11 ತಿಂಗಳಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿ 35 ಪ್ರಕರಣ ದಾಖಲಾಗಿದೆ. ಎಲ್ಲಾ ಪ್ರಕರಣಗಳಲ್ಲಿ ಯುವಕರೇ ಹೆಚ್ಚಾಗಿದ್ದಾರೆ. ವ್ಯಸನಿಗಳು ಕಾನೂನಿನ ಕುಣಿಕೆಗೆ ಸಿಲುಕಿದರೆ ಮತ್ತೆ ಹೊರಬರುವುದು ಅಷ್ಟು ಸುಲಭವಲ್ಲ ಎಂದು ಎಚ್ಚರಿಸಿದರು.
ಮಂಗಳೂರಿನ ಗಾಂಜಾ ವ್ಯಸನಿಗಳ ಯುವಕರ ಗುಂಪು ಕಡಲತೀರದ ಬೆಂಗ್ರೆ ಎಂಬಲ್ಲಿ ದುಶ್ಚಟದ ಅಮಲಿನಲ್ಲಿ ತಮ್ಮೊಂದಿಗಿದ್ದ ಯುವಕನನ್ನು ಕೊಲೆ ಮಾಡಿ ಮೃತದೇಹವನ್ನು ತಂದು ಮೂಡಿಗೆರೆ ತಾಲೂಕಿನ ಪ್ರೇಕ್ಷಣೀಯ ಸ್ಥಳ ದೇವರಮನೆ ಅರಣ್ಯದಲ್ಲಿ ಬಿಸಾಡಿ ಹೋಗಿದ್ದರು. ಈ ಪ್ರಕರಣದ ತನಿಖೆ ಜಾಡು ಹಿಡಿದಾಗ ಮಾದಕ ವಸ್ತು ಸೇವನೆ ಮಾಡುವ ತಂಡದಿಂದ ಯುವಕ ಕೊಲೆಯಾಗಿದ್ದಾನೆ ಎಂದು ತಿಳಿಯಿತು. ಸಿಕ್ಕಿಬಿದ್ದ ಆರೋಪಿಗಳು ಮತ್ತು ಕೊಲೆಯಾದ ಯುವಕ ಅವರವರ ಕುಟುಂಬಕ್ಕೆ ಆಸರೆಯಾಗಿದ್ದರು. ಈಗ ಆ ಯುವಕರ ಕುಟುಂಬ ಬೀದಿಗೆ ಬರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ನಡೆದಾಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೆ 20 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಮಹಿಳೆಯರು ಮತ್ತು ಬಾಲಕಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಮುಂದುವರಿದಿರುವುದು ದುರಂತ. ವರದಕ್ಷಿಣೆ ನಿಷೇಧ ಕಾಯ್ದೆಯಿಂದ ಪತಿ-ಪತ್ನಿ ದೂರವಾಗುವುದರಲ್ಲಿ ಅರ್ಥವಿಲ್ಲ. ಸಂಸಾರದಲ್ಲಿ ಸಣ್ಣಪುಟ್ಟ ಜಗಳವಾಗಿ ಅದು ವಿಕೋಪಕ್ಕೆ ತಿರುಗಿದರೆ ಹಿರಿಯರ ಮೂಲಕ ಆಪ್ತ ಸಮಾಲೋಚನೆ ನಡೆಸಿ ಒಂದುಗೂಡುವುದು ಒಳ್ಳೆಯದು ಎಂದು ತಿಳಿಸಿದರು.
ಮಸೀದಿ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಧರ್ಮಗುರುಗಳಾದ ಮುಸ್ತಫಾ ಯಮಾನಿ, ಸಿನಾನ್ ಫೈಝಿ, ಶಂಸುದ್ದೀನ್ ಪೈಝಿ, ಯಾಕೂಬ್ ಫೈಝಿ, ಝೈದ್ ಫೈಝಿ, ಎ.ಎಂ.ಶರೀಫ್, ಇಸ್ಮಾಯಿಲ್, ಇಬ್ರಾಹಿಂ ಯಾದ್ಗಾರ್, ನಾಸೀರ್ ಇತರರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net