

ಬೆಂಗಳೂರು: ಚೇತನ್ ಎಂಬ ಯುವಕ ಸಿದ್ಧಾರ್ಥ ಎಂಬಾತನಿಗೆ ಹುಡುಗಿಯಂತೆ ಮೆಸೇಜ್ ಮಾಡಿದ್ದಾನೆ. ಬಳಿಕ ನಿನ್ನಲ್ಲಿ ಮಾತನಾಡಬೇಕು ಎಂದು ಕರೆಸಿ ಚಾಕು ಇರಿದಿರುವ ಪ್ರಕರಣವೊಂದು ಗೋವಿಂದ ರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ಸ್ಟಾಗ್ರಾಂನಲ್ಲಿ ಕೀರ್ತಿ ಎಂಬ ನಕಲಿ ಖಾತೆಯಿಂದ ಸಿದ್ಧಾರ್ಥ ಎಂಬಾತನಿಗೆ ಚೇತನ್ ಮೆಸೇಜ್ ಮಾಡಿದ್ದಾನೆ. ಸದ್ಯ ಚೂರಿ ಇರಿತಕ್ಕೆ ಒಳಗಾಗಿರುವ ಸಿದ್ಧಾರ್ಥನಿಗೆ ಕೆಲ ದಿನಗಳ ಹಿಂದೆ ಯುವತಿ ಎಂದು ಹೇಳಿಕೊಂಡು ಚೇತನ್ ಮೆಸೇಜ್ ಮಾಡಿದ್ದ. ಇದು ನಕಲಿ ಖಾತೆ ಎಂದು ಗೊತ್ತಾಗುತ್ತಿದ್ದಂತೆ ಯಾಕೆ ಮೆಸೇಜ್ ಮಾಡುತ್ತಿದ್ದೀಯಾ ಎಂದು ಸಿದ್ಧಾರ್ಥ ಪ್ರಶ್ನೆ ಮಾಡಿದ್ದ.
ಸಿದ್ಧಾರ್ಥ ಪ್ರಶ್ನೆ ಮಾಡುತ್ತಿದ್ದಂತೆ ನನ್ನನ್ನು ಭೇಟಿ ಮಾಡು ಹೇಳುತ್ತೇನೆ ಎಂದು ಚೇತನ್ ಕರೆಸಿಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಚೇತನ್ ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದು, ಚಾಕು ತಂದಿದ್ದ. ಜತೆಗೆ ತನ್ನ ಸಹಚರರನ್ನು ಕರೆದುಕೊಂಡು ಬಂದಿದ್ದ. ಯೋಜನೆ ಹಾಕಿಕೊಂಡಂತೆ ಮಾತಿನ ಚಕಮಕಿ ನಡೆಯುತ್ತಿದ್ದಾಗಲೇ ಚೇತನ್ ಸಿದ್ಧಾರ್ಥನಿಗೆ ಇಬ್ಬರು ಹಲ್ಲೆ ಮಾಡಿ, ತೊಡೆಗೆ ಚಾಕು ಇರಿದಿದ್ದಾರೆ.
ಚಾಕು ಇರಿತಕ್ಕೆ ಒಳಗಾದ ಸಿದ್ಧಾರ್ಥ ನಡು ರಸ್ತೆಯಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಸದ್ಯ ಸಿದ್ದಾರ್ಥ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಘಟನೆಯ ಬಗ್ಗೆ ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.