

ಬೆಟ್ಟದಪುರ: ಬೆಟ್ಟದಪುರ ಸಮೀಪದ ಕೂರಗಲ್ಲು ಸೋಲಿಗರ ಕಾಲನಿಯಲ್ಲಿ ವಿದ್ಯುತ್ ಪ್ರವಹಿಸಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಕೂರಗಲ್ಲು ಕಾಲನಿ ನಿವಾಸಿ ಬಸವರಾಜ (30) ಮೃತಪಟ್ಟವರು. ಬುಧವಾರ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಪಕ್ಕದ ಜಮೀನಿನವರಾದ ಬ್ಯಾಲಾಳು ಮಂಜು ಎಂಬುವರು ಇವರ ಜಮೀನಿನ ಮೇಲೆ ಅಕ್ರಮವಾಗಿ ಕಂಬ ಹಾಗೂ ವಿದ್ಯುತ್ ತಂತಿಯನ್ನು ಎಳೆದು ವಿದ್ಯುತ್ ಸಂಪರ್ಕ ಪಡೆದಿದ್ದರು. ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಸರಿಯಾದ ಕೆಲಸ ನಿರ್ವಹಣೆ ಮಾಡದಿರುವುದರಿಂದ ಬುಧವಾರ ಬೆಳಗ್ಗೆ ಜಮೀನಿಗೆ ತಂಬಾಕು ಸಸಿ ನಾಟಿ ಮಾಡುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ ಎಂದು ಮೃತರ ತಾಯಿ ಸ್ವರ್ಣಗೌರಿ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.