ವಿಷ ಕುಡಿದಿದ್ದ ಯುವಕ ಸಾವು

Published on

ಅರಸೀಕೆರೆ: ಪ್ರೀತಿಸಿದ ಯುವತಿ ಕೈ ಕೊಟ್ಟ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದ ತಾಲೂಕಿನ ಬಾಣಾವರ ಹೋಬಳಿ ಭೈರಗೊಂಡನಹಳ್ಳಿ ಭೋವಿ ಕಾಲನಿ ಯುವಕ ದರ್ಶನ್(23)ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

ನಗರದ ರಾಯಲ್ ಕಾಮರ್ಸ್ ಕಾಲೇಜಿನ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಗಂಡಸಿ ಹೋಬಳಿ ಬೇವಿನಹಳ್ಳಿ ಗ್ರಾಮದ ಯುವತಿ ಹಾಗೂ ದರ್ಶನ್ ಕೆಲ ವರ್ಷದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ನಡೆದ ವಿದ್ಯಮಾನದಿಂದ ಆಕೆ ಪ್ರೀತಿ ನಿರಾಕರಿಸಿದ್ದಾಳೆ. ಇದರಿಂದ ಬೇಸರಗೊಂಡಿದ್ದ ದರ್ಶನ್ ಫೆ.5ರಂದು ಮನೆಯಲ್ಲಿ ವಿಷ ಕುಡಿದಿದ್ದ. ತಕ್ಷಣವೇ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ನಂತರ ಹಾಸನದ ಹಿಮ್ಸ್‌ಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಮೈಸೂರಿನ ಬೃಂದಾವನ ಆಸ್ಪತ್ರೆಗೆ ಸೇರಿಸಿದ್ದರು. ಇದೀಗ ನಾಲ್ಕು ದಿನದ ನಂತರ ಯುವಕ ಮೃತಪಟ್ಟಿದ್ದಾನೆ.

ಮೃತ ದರ್ಶನ್ ಮಾವ ಬಾಣಾವರ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸಲಾಗಿದೆ. ಭೈರಗೊಂಡನಹಳ್ಳಿ ಭೋವಿ ಕಾಲನಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net