ಬಿಲ್​ ಪಾವತಿಸುವಾಗ ಹೃದಯಾಘಾತವಾಗಿ ಯುವಕ ಸಾವು; ಆಘಾತಕಾರಿ ವಿಡಿಯೋ ವೈರಲ್​

Heart Attack
Published on

ಜೈಪುರ: ಇತ್ತೀಚಿನ ವರ್ಷದಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಜನರನ್ನು ಹೆಚ್ಚು ಬಾಧಿಸುತ್ತಿದ್ದು, ಹಠಾತ್ ಹೃದಯಾಘಾತದಿಂದಾಗಿ (Heart Attack) ಮಕ್ಕಳು, ಯುವಕರು ಸೇರಿದಂತೆ ಹಲವರು ಅಸುನೀಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೀಗ ಅಂತಹದ್ದೆ ಘಟನೆಯೊಂದರಲ್ಲಿ ಯುವಕನೋರ್ವ ಹೋಟೆಲ್​ನಲ್ಲಿ ಬಲ್ ಕಟ್ಟುವಾಗ ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯು ರಾಜಸ್ಥಾನದ ಮೇವಾರ್ ಜಿಲ್ಲೆಯ ರಾಜಸಮಂದ್​ನಲ್ಲಿ ನಡೆದಿದ್ದು, ಮೃತ ಯುವಕನನ್ನು ಸಚಿನ್ ಗರು (27) ಎಂದು ಗುರುತಿಸಲಾಗಿದೆ. ಯುವಕನ ಕೊನೆಕ್ಷಣದ ವಿಡಿಯೋ ಹೋಟೆಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನಕಲಕುತ್ತಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಯುವಕ ಹೋಟೆಲಿನ ಕ್ಯಾಶ್ ಕೌಂಟರ್​ನಲ್ಲಿ ಬಿಲ್ ಪಾವತಿಸಲು ನಿಂತಿದ್ದು, ಕ್ಯಾಶಿಯರ್ ಜೊತೆ ಮಾತನಾಡುತ್ತ ಬಾಯಿಗೆ ಚಮಚದಲ್ಲಿ ಸೊಂಪನ್ನು ಹಾಕಿಕೊಳ್ಳುವುದನ್ನು ನೋಡಬಹುದಾಗಿದೆ. ಹಾಗೆಯೇ ಮಾತನಾಡುತ್ತ ಹಣವನ್ನು ಟೇಬಲ್​ ಮೇಲೆ ಇಡುವ ಯುವಕ ನೋಡ ನೋಡುತ್ತಿದ್ದಂತೆ ಕುಸಿದು ಬೀಳುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಪ್ರಕರಣದ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದು, ಮೃತರನ್ನು ಸಚಿನ್ ಗರು ಎಂದು ಗುರುತಿಸಲಾಗಿದ್ದು, ಟಿವಿಎಸ್​ ಚೌಕ್​ನಲ್ಲಿರುವ ಹೋಟೆಲಿಗೆ ಊಟಕ್ಕೆಂದು ಹೋಗಿದ್ದರು. ಬಿಲ್ ಪಾವತಿಸಿದ ಬಳಿಕ ಅವರು ಕುಸಿದುಬಿದ್ದಿದ್ದು, ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೃದಯಾಘಾತದಿಂದ (Heart Attack) ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net