

ಅಯೋಧ್ಯೆ: ವಿಶ್ವದ ಪ್ರಸಿದ್ಧ ದಾರ್ಮಿಕ ಸ್ಥಳವಾದ ರಾಮಮಂದಿರದಲ್ಲಿ ಭದ್ರತೆ ಹಾಗೂ ಖಾಸಗಿತನವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಮಜನ್ಮಭೂಮಿ ಟ್ರಸ್ಟ್ ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಸೇರಿದಂತೆ ಅನೇಕ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದೆಲ್ಲಾ ಗೊತ್ತಿದ್ದರೂ ಸಹ ಕೆಲವರು ಉದ್ಧಟತನ ಮೆರೆದಿರುವಂತಹ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿವೆ. ಇದೀಗ ವಡೋದರಾ ಮೂಲದ ಯುವಕನೋರ್ವ ಕಠಿಣ ನಿಯಮಗಳ ಬಗ್ಗೆ ಅರಿವಿದ್ದರೂ ಉದ್ಧಟತನ ಮೆರೆದಿದ್ದು, ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಡೋದರಾ ಮೂಲದ ಜೈಕುಮಾರ್ ಎಂಬ ಯುವಕನೋರ್ವ ರಾಮಮಂದಿರದೊಳಗೆ ತನ್ನ ಕನ್ನಡಕದೊಳಗೆ (Spects) ಅಳವಡಿಸಲಾದ ಕ್ಯಾಮರಾವನ್ನು ಬಳಸಿಕೊಂಡು ಚಿತ್ರಗಳನ್ನು ತೆಗೆಯುತ್ತಿದ್ದನ್ನು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಕೂಡಲೇ ಯುವಕನನ್ನು ವಶಕ್ಕ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಭದ್ರತಾ ಸಿಬ್ಬಂದಿಯೊಬ್ಬರು, ದೇವಾಲಯದ ಆವರಣ ಹಾಗೂ ಸುತ್ತಮುತ್ತಲು ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದ್ದು, ತಿಳಿದಿದ್ದರೂ ಆತ ಈ ರೀತಿ ಮಾಡುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಗುಪ್ತಚರ ಹಾಗೂ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಆತ ಯಾಕೆ ಈ ರೀತಿ ಮಾಡಿದ ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಯು ಧಾರ್ಮಿಕ ಸ್ಥಳಗಳಲ್ಲಿ, ವಿಶೇಷವಾಗಿ ಅಯೋಧ್ಯೆಯ ರಾಮ ಮಂದಿರದಂತಹ ಮಹತ್ತರವಾದ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಥಳಗಳ ಭದ್ರತಾ ಕ್ರಮಗಳ ಬೇಡಿಕೆಗೆ ಕಾರಣವಾಗಿದ್ದು, ನೆಟ್ಟಿಗರು ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.