

ಮುಂಬೈ: ಜನವರಿ 16ರ ನಸುಕಿನ ಜಾವ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ನನ್ಜು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ತೀವ್ರಗೊಂಡಂತೆ ಒಂದೊಂದೇ ಆಘಾತಕಾರಿ ಅಂಶ ಬೆಳಕಿಗೆ ಬರುತ್ತಿದೆ.
ಇನ್ನೂ ಘಟನೆ ನಡೆದಾಗ ನಟ ಸೈಫ್ ಅಲಿ ಖಾನ್ರನ್ನು (Saif Ali Khan) ಆಟೋ ಮೂಲಕ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯ್ತು. ನಟ ಸೈಫ್ ಅಲಿ ಖಾನ್ರನ್ನು ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಆಟೋ ಚಾಲಕ ಭಜನ್ ಸಿಂಗ್ ರಾಣಾ ಕೂಡ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದರು. ಆದರೆ, ನಟ ಸೈಫ್ ಅಲಿ ಖಾನ್ ಆಟೋ ಚಾಲಕನಿಗೆ ಆ ಸಮಯದಲ್ಲಿ ಎಷ್ಟು ಹಣ ನೀಡಿದರು ಎಂಬುದರ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದರು. ಈ ಬಗ್ಗೆ ಇದೀಗ ವರದಿಯೊಂದು ಹರಿದಾಡುತ್ತಿದ್ದು, ಆಟೋ ಚಾಲಕ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ನಟ ಸೈಫ್ ಅಲಿ ಖಾನ್ರನ್ನು ಆಸ್ಪತ್ರೆಗೆ ದಾಖಲಿಸಿದ ಆಟೋ ಚಾಲಕನಿಗೆ ಭಾರೀ ಮೊತ್ತ ನೀಡಲಾಗಿದೆ ಎಂಬ ವರದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಟ ಸೈಫ್ ಅಲಿ ಖಾನ್ ಅವರ ತಂಡ ಆಟೋ ಚಾಲಕನನ್ನು ಸಂಪರ್ಕಿಸಿ ಈ ಮೊತ್ತವನ್ನು ತಲುಪಿಸಿದೆ ಎಂದು ಹೇಳಲಾಗಿದೆ. ಆದರೆ, ಸತ್ಯಾಸತ್ಯತೆ ಇನ್ನಷ್ಟೇ ತಿಳಿದು ಬರಬೇಕಿದೆ. ಇದಲ್ಲದೆ ಸಂಸ್ಥೆಯೊಂದು ಆಟೋ ಚಾಲಕನಿಗೆ 11 ಸಾವಿರ ರೂಪಾಯಿ ಬಹುಮಾನವನ್ನು ನೀಡಿ ಸತ್ಕರಿಸಿದೆ.
ಇನ್ಣೂ ಹಣ ಪಡೆದಿರುವ ಬಗ್ಗೆ ಆಟೋ ಚಾಲಕ ಪ್ರತಿಕ್ರಿಯಿಸಿದ್ದು, ನನ್ನನ್ನು ಪೊಲೀಸರು ವಿಚಾರಣೆಗೆಂದ್ರ ಕರೆದಿದ್ದರು. ನಾನು ಏನು ನೋಡಿದ್ದೇನೋ ಅದನ್ನೇ ಹೇಳಿದ್ದೇನೆ. ಇನ್ನೂ ಘಟನೆ ನಡೆದ ರಾತ್ರಿ ನಾನು ಯಾರಿಂದಲೂ ಹಣ ಪಡೆದಿಲ್ಲ. ಆ ಕ್ಷಣ ಜೀವ ಉಳಿಸುವುದು ನನ್ನ ಉದ್ದೇಶವಾಗಿತ್ತು. ಕರೀನಾ ಅಥವಾ ಸೈಫ್ ಅಲಿ ಖಾನ್ (Saif Ali Khan) ಅವರ ತಂಡದ ಸದಸ್ಯರು ಯಾರು ನನ್ನನ್ನು ಸಂಪರ್ಕಿಸಿಲ್ಲ. ನಾನು ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಆಟೋ ಚಾಲಕ ಭಜನ್ ಸಿಂಗ್ ರಾಣಾ ಸ್ಪಷ್ಟಪಡಿಸಿದ್ದಾರೆ.