

ನೋವು, ನೋಯದವಗೆ ಅರ್ಥವಾಗುವದಿಲ್ಲ. ಹೆರದಿದ್ದವರಿಗೆ ಹೆರಿಗೆಯ ನೋವು ಹೇಗೆ ಅರ್ಥವಾದೀತು? ಹಸಿದವನೇ ಬಲ್ಲ ಹಸಿವಿನ ಬಾಧೆಯನು, ಪರರ ಕಷ್ಟಮಂ ಸುಖಿ ಅರಿಯನ್. ಸುಖದ ಸುಪ್ಪತ್ತಿಗೆ ಯಲ್ಲಿ ಬೆಳೆದ ರಾಜನೊಬ್ಬ ತನ್ನ ಪ್ರಜೆಗಳೆಲ್ಲ ಹಸಿವಿನಿಂದ ಕಂಗಾಲಾಗಿ ಬೇರೆ ಬೇರೆ ಕಡೆ ದುಡಿದುಣ್ಣಲು ಹೊರಟದ್ದನ್ನು ನೋಡಿ, ಮಂತ್ರಿಯನ್ನು ಕೇಳಿದನಂತೆ, ಇವರೆಲ್ಲ ಎಲ್ಲಿಗೆ ಹೊರಟಿದ್ದಾರೆ? ಎಂದು. ಮಂತ್ರಿ ಹೇಳಿದ: ಮಹಾರಾಜ! ಹೊಟ್ಟೆಗೆ ರೊಟ್ಟಿ ಬೇಕಲ್ಲವೇ, ಅದಕ್ಕೆ ಹೊರಟಿದ್ದಾರೆ. ‘ಓ ಹೀಗೊ ರೊಟ್ಟಿ ಇಲ್ಲದಿದ್ದರೇನಂತೆ ಚಪಾತಿ ತಿನ್ನಲು ಬರುವದಿಲ್ಲವೇ?’ ಎಂದನಂತೆ. ಹೀಗೆ ‘ಪರರ ಕಷ್ಟಮಂ ಸುಖಿ ಅರಿಯನು’. ಸದಾಕಾಲ ವಿಲಾಸಿ ಜೀವನದಲ್ಲಿ, ಕಷ್ಟವನ್ನೇ ಕಾಣದ ರೀತಿಯಲ್ಲಿ ಬೆಳೆದವನಿಗೆ ಇನ್ನೊಬ್ಬರ ಕಷ್ಟ ಅರ್ಥವಾಗುವುದಿಲ್ಲ. ಕುಮಾರವ್ಯಾಸ ಭಾರತದ ಸಭಾಪರ್ವದಲ್ಲಿ ಬರುವ ಮಾತೊಂದು ಅರ್ಥಪೂರ್ಣವಾಗಿದೆ.
ಅರಸು ರಾಕ್ಷಸ ಮಂತ್ರಿಯೆಂಬುವ ಮೊರೆವ ಹುಲಿ,ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು ಉರಿ ಉರಿವುತಿದೆ ದೇಶ ನಾವಿ ನ್ನಿರಲು ಬಾರದೆನುತ್ತ ಜನ ಬೇ ಸರದ ಬೇಗೆಯಲಿರದೆಲೇ ಭೂಪ ಕೇಳೆಂದ
ರಾಜನೇ ರಾಕ್ಷಸನಾದರೆ, ಮಂತ್ರಿಗಳೇ ಗರ್ಜಿಸುವ ಹುಲಿಗಳಾದರೆ, ಪರಿವಾರವೆಲ್ಲವೂ ಹದ್ದಿನಂತೆ ಎರಗಿದರೆ, ಬಡವರ (ಪ್ರಜೆಗಳ) ದುಃಖವನ್ನು ಕೇಳುವವರಾರು? ಪಟ್ಟಣವೇ ಹೊತ್ತಿ ಉರಿಯುವುದಾದರೆ ವಾಸಿಸುವುದಾದರೂ ಎಲ್ಲಿ? ಇಲ್ಲಿ ಇರಬಾರದೆನ್ನುತ್ತ ಪ್ರಜೆಗಳೆಲ್ಲ ಬೇಸರದುಸಿರು ಬಿಡುತ್ತ ಪಟ್ಟಣವ ತೊರೆಯುತ್ತಿರುವರು.
-ಇದು ಕೇವಲ ಮಹಾಭಾರತದ ಕಥೆಯಷ್ಟೇ ಅಲ್ಲ, ಪ್ರಸ್ತುತ ವಿಷಯವೂ ಹೌದು, ಕಡುಬಡವರ, ನಿಸ್ಸಹಾಯಕರ, ನಿರ್ಗತಿಕರ, ಅಳಲನ್ನು ಕೇಳದ, ಕೇಳಿಯೂ ಕೇಳದಂತಿರುವವರ ಸಿರಿವಂತಿಕೆಗೆ ಧಿಕ್ಕಾರವಿರಲಿ. ನಾವು ಬದುಕುವುದರೊಂದಿಗೆ ಇನ್ನೊಬ್ಬರನ್ನೂ ಬದುಕಿಸಬೇಕು.