ನಿಮ್ಮ ಮನೆಯಲ್ಲೂ ಗೀಸರ್​ ಬಳಸ್ತೀರಾ? ಹಾಗಿದ್ರೆ, ಈ ಮಿಸ್ಟೇಕ್​ಗಳನ್ನು ಮಾಡದಿರಿ! ಇರಲಿ ಎಚ್ಚರ | Geyser

ನಿಮ್ಮ ಮನೆಯಲ್ಲೂ ಗೀಸರ್​ ಬಳಸ್ತೀರಾ? ಹಾಗಿದ್ರೆ, ಈ ಮಿಸ್ಟೇಕ್​ಗಳನ್ನು ಮಾಡದಿರಿ! ಇರಲಿ ಎಚ್ಚರ | Geyser
Published on

Geyser Safety: ಈಗಷ್ಟೇ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದೆ. ಪ್ರತಿದಿನ ಬೆಳಗ್ಗೆ ಸ್ನಾನಕ್ಕೆ ಬಿಸಿ ನೀರು ಬೇಕೇ ಬೇಕು. ಕೆಲವೇ ಕೆಲವರನ್ನು ಹೊರತುಪಡಿಸಿ ಇನ್ನುಳಿದವರು ಬಿಸಿ ನೀರಿನಲ್ಲೇ ಜಳಕ ಮಾಡಲು ಬಯಸುತ್ತಾರೆ. ಅದರಲ್ಲೂ, ಚಳಿಗಾಲ ಅಂದಮೇಲೆ ಕೇಳಬೇಕೇ? ಹಾಟ್​ ವಾಟರ್​ ಮೈಮೇಲೆ ಬೀಳಲೇಬೇಕು. ಸಿಟಿಗಳಲ್ಲಿರುವ ನಿವಾಸಿಗಳು ಗ್ಯಾಸ್​ ಅಥವಾ ವಿದ್ಯುತ್ ಚಾಲಿತ ಗೀಸರ್​ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅಷ್ಟಕ್ಕೂ ಗೀಸರ್​ನಿಂದ ಆಗುವ ಅನಾಹುತಗಳು ಒಂದೆರೆಡಲ್ಲ. ಅದಕ್ಕೆ ಇತ್ತೀಚಿನ ಘಟನೆಯೇ ಜ್ವಲಂತ ಸಾಕ್ಷಿ.

ಗೀಸರ್​ ಲೀಕ್​ಗೆ ಅಕ್ಕ-ತಂಗಿ ಮೃತ

ಇಬ್ಬರು ಸಹೋದರಿಯರು ಗ್ಯಾಸ್​ ಗೀಸರ್​ ಲೀಕ್​ನಿಂದ ಸ್ನಾನಗೃಹದಲ್ಲೇ ಮೃತಪಟ್ಟ ಘಟನೆ ಗುರುವಾರ (ಅ.23) ರಾತ್ರಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸಂಭವಿಸಿತು. ಇಬ್ಬರು ತಮ್ಮ ಸ್ನಾನಗೃಹಕ್ಕೆ ಸ್ನಾನ ಮಾಡಲೆಂದು ತೆರಳಿದ ವೇಳೆ ಗೀಸರ್​ ಆನ್​ ಮಾಡಿದಾಗ ಅದು ಉರಿದು, ಅದರಿಂದ ಹೊರಬಂದ ಕಾರ್ಬನ್ ಮಾನಾಕ್ಸೈಡ್ ಉಸಿರುಗಟ್ಟಿಸಿದ ಪರಿಣಾಮ ಯುವತಿಯರು ದುರಂತ ಅಂತ್ಯ ಕಂಡರು.

ಪ್ರಸ್ತುತ, ಗೀಸರ್ ಇಲ್ಲದ ಮನೆಗಳು ಬಹಳ ಅಪರೂಪ. ಗೀಸರ್ ಬಳಸುವುದರಿಂದ ಜೀವಕ್ಕೆ ಕುತ್ತು ಎಂಬ ಭಯಾನಕ ಸಂಗತಿ ನಿಮಗೆ ಗೊತ್ತಿರಲಿ. ಮನೆಗಳಲ್ಲಿ ಹೇಗೆ ಎಸಿ ಸರ್ವಿಸ್ ಮಾಡಲಾಗುತ್ತದೆಯೋ ಹಾಗೆಯೇ, ವಿದ್ಯುತ್ ಗೀಸರ್‌ಗಳನ್ನು ಸಹ ಆಗಾಗ್ಗೆ ಸರ್ವಿಸ್ ಮಾಡಿಸುತ್ತಿರಬೇಕು. ಇಲ್ಲದಿದ್ದರೆ, ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದು ಎಚ್ಚರಿಕೆಯ ಗಂಟೆ!

ಸೋರಿಕೆ ಅಥವಾ ಇತರ ಸಮಸ್ಯೆ

ಸಾಮಾನ್ಯವಾಗಿ, ವಾಟರ್ ಹೀಟರ್ ಹೆಚ್ಚಿನ ವೋಲ್ಟೇಜ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕೆಲವೊಮ್ಮೆ, ಟ್ಯಾಂಕ್‌ನಲ್ಲಿ ನೀರಿನ ಸೋರಿಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಅನೇಕ ಸಂದರ್ಭಗಳಲ್ಲಿ, ಇದು ಶಾರ್ಟ್​ ಸೆರ್ಕ್ಯೂಟ್​ಗೂ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಮುನ್ನೆಚ್ಚರಿಕೆಯಾಗಿ, ನಿಮ್ಮ ವಿದ್ಯುತ್ ಗೀಸರ್ ಅನ್ನು ಆನ್ ಮಾಡುವ ಮೊದಲು ಅದನ್ನು ಸರ್ವಿಸ್ ಮಾಡಿಸುವುದು ಅತೀ ಮುಖ್ಯ. ಕಾರಣ, ಇದರಿಂದ ಆಗುವ ಲೀಕೇಜ್​ ಅಥವಾ ಇತರೆ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ವರ್ಷಕ್ಕೆ ಎಷ್ಟು ಬಾರಿ ಸರ್ವಿಸ್ ಅಗತ್ಯ?

ವಿದ್ಯುತ್ ಗೀಸರ್ ಸರ್ವಿಸ್ ಮಾಡಿಸುವುದು ಎಂದರೆ ಅದರ ವೈರಿಂಗ್, ಸೋರಿಕೆ ಮತ್ತು ಸಾಕೆಟ್‌ಗಳ ಸ್ಥಿತಿಯನ್ನು ಪರಿಶೀಲಿಸುವುದು. ಗೀಸರ್‌ನಲ್ಲಿ ಯಾವುದೇ ದೋಷ ಅಥವಾ ಹಾನಿಯಿದ್ದರೆ, ಅದನ್ನು ಸಮಯಕ್ಕೆ ಸರಿಯಾಗಿ ರೆಡಿ ಮಾಡಿಸುವುದು ಒಳಿತು. ಸುರಕ್ಷತೆ ಮತ್ತು ಸರಿಯಾದ ನೀರು ಸರಬರಾಜನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಗೀಸರ್‌ಗಳನ್ನು ವರ್ಷಕ್ಕೊಮ್ಮೆ ಸರ್ವಿಸ್ ಮಾಡಿಸಬೇಕು.

ದೋಷಪೂರಿತ ವೈರಿಂಗ್ ಮನೆಯಾದ್ಯಂತ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ನಿಮ್ಮ ಪ್ರದೇಶದಲ್ಲಿ ಉಪ್ಪು ನೀರಿದ್ದರೆ, ನಿಮ್ಮ ವಿದ್ಯುತ್ ಗೀಸರ್ ಅನ್ನು ವರ್ಷಕ್ಕೆ ಎರಡು ಬಾರಿ ಸರ್ವಿಸ್ ಮಾಡಿಸುವುದು ಸೂಕ್ತ. ಏಕೆಂದರೆ, ಉಪ್ಪು ನೀರು ವಿದ್ಯುತ್ ಅಂಶಗಳು, ರಾಡ್‌ಗಳು, ಸ್ಟೀಲ್ ಟ್ಯಾಂಕ್‌ಗಳು ಇತ್ಯಾದಿಗಳನ್ನು ತ್ವರಿತವಾಗಿ ಹಾನಿಗೊಳಿಸುತ್ತದೆ ಎಂಬುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net