

ಭೂಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಕರೊನಾ ಸೋಂಕು ದೃಢಪಡುತ್ತಿದ್ದಂತೆ, ಮಾಜಿ ಸಿಎಂ ಕಮಲನಾಥ್ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕಮಲನಾಥ್, ಶಿವರಾಜ್ ಜೀ..ನಿಮಗೆ ಕರೊನಾ ತಗುಲಿದೆ ಎಂದು ಕೇಳಿ ನನಗೆ ನೋವಾಗುತ್ತಿದೆ. ನೀವು ಶೀಘ್ರವೇ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಭವನಕ್ಕೆ ಕರೆದೊಯ್ಯುವೆ, ಪ್ರಧಾನಿ ನಿವಾಸದೆದುರು ಪ್ರತಿಭಟನೆಗೂ ಸಿದ್ಧ; ಬಗೆಹರಿಯದ ರಾಜಸ್ಥಾನ ಬಿಕ್ಕಟ್ಟು
ನಾವು ಕಾಂಗ್ರೆಸ್ನವರೆಲ್ಲ ಕೊವಿಡ್-19 ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸಿದಾಗ ನೀವು ನಮ್ಮನ್ನು ಟೀಕಿಸಿದ್ದಿರಿ. ಕಾಂಗ್ರೆಸ್ನವರು ತಮ್ಮ ಸರ್ಕಾರ ಉಳಿಸಿಕೊಳ್ಳಲು ಕರೊನಾ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಕೊವಿಡ್-19 ಪರಿಸ್ಥಿತಿಯನ್ನೇ ತಂತ್ರವನ್ನಾಗಿಸಿಕೊಂಡಿದ್ದಾರೆ ಎಂದು ಅಂದು ನಮಗೆ ಹೇಳಿದ್ದಿರಿ ಎಂದು ಕಮಲನಾಥ್ ತಿರುಗೇಟು ನೀಡಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ಬೆಳಗ್ಗೆ ಟ್ವೀಟ್ ಮಾಡಿ, ತಮಗೆ ಕರೊನಾ ಸೋಂಕು ತಗುಲಿದ್ದನ್ನು ತಿಳಿಸಿದ್ದರು. ಹಾಗೇ, ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರೆಲ್ಲರೂ ಹೋಗಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಅದಾದ ಕೆಲವೇ ಹೊತ್ತಲ್ಲಿ ಕಮಲನಾಥ್ ಅವರು ಟ್ವೀಟ್ ಮೂಲಕ ಮುಖ್ಯಮಂತ್ರಿಯ ಕಾಲೆಳೆದಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಆಗಸ್ಟ್ನಲ್ಲಿ ಸಿನಿಮಾ ಥಿಯೇಟರ್ ತೆರೆಯಲು ಸಿದ್ಧತೆ; ಮಾಲೀಕರೇ ಒಪ್ಪುತ್ತಿಲ್ಲ…!
ಶಿವರಾಜ್ ಅವರೇ, ನೀವೂ ಸಹ ಕೊವಿಡ್-19ಗೆ ಸಂಬಂಧಪಟ್ಟ ಶಿಷ್ಟಾಚಾರಗಳನ್ನು ಪಾಲನೆ ಮಾಡುವ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದಿತ್ತು. ಆದರೆ ನೀವು ನಮ್ಮ ಬಗ್ಗೆ ಜೋಕ್ ಮಾಡುವುದರಲ್ಲೇ ಕಾಲ ಕಳೆದಿರಿ. ಈಗ ನೋಡಿ ನಿಮಗೂ ಕರೊನಾ ತಗುಲಿದೆ. ಏನೇ ಆದರೂ ಗುಣಮುಖರಾಗಿ ಶೀಘ್ರದಲ್ಲೇ ಕೆಲಸದಲ್ಲಿ ತೊಡಗಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಇನ್ನು ತಾವು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಕರೊನಾ ವೈರಸ್ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದೇವೆ. ನನ್ನ ಅನುಪಸ್ಥಿತಿಯಲ್ಲಿ, ಕರೊನಾ ಪರಿಸ್ಥಿತಿ ಪರಿಶೀಲನಾ ಸಭೆಯನ್ನು ಗೃಹ ಸಚಿವ ನರೋತ್ತಮ್ ಮಿಶ್ರಾ, ನಗರಾಭಿವೃದ್ಧಿ ಮತ್ತು ಆಡಳಿತ ಸಚಿವ ಭೂಪೇಂದ್ರ ಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಮತ್ತು ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ ನಡೆಸಲಿದ್ದಾರೆ ಎಂದು ಶಿವರಾಜ್ ಚೌಹಾಣ್ ಹೇಳಿದ್ದಾರೆ. (ಏಜೆನ್ಸೀಸ್)