ಇಲ್ಲಿಗೆ ಕರೆತನ್ನಿ ನಾವು ಚೆನ್ನಾಗಿ ನೋಡಿಕೊಳ್ತೇವೆ; ಔರಂಗಜೇಬನ್ನು ಹೊಗಳಿದ ಎಸ್​ಪಿ ಶಾಸಕನ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ

Yogi Adityanath
Published on

ಲಖನೌ: ಮೊಘಲ್ ದೊರೆ ಔರಂಗಜೇಬನನ್ನು ಹಾಡಿ ಹೊಗಳಿದ್ದ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿಯನ್ನು ಮಹಾರಾಷ್ಟ್ರ ವಿಧಾನಸಭೆಯಿಂದ ಉಚ್ಛಾಟಿಸಲಾಗಿದ್ದು, ಇದೀಗ ಎಸ್​ಪಿ ಶಾಸಕನ ಹೇಳಿಕೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಪ್ರತಿಕ್ರಿಯಿಸಿದ್ದಾರೆ.

ಉತ್ತರಪ್ರದೇಶ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್ (Yogi Adityanath)​, ಮೊಘಲ್ ದೊರೆ ಔರಂಗಜೇಬನನ್ನು ಹೊಗಳಿ ಮಾತನಾಡಿರುವ ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿಯನ್ನು ಮಹಾರಾಷ್ಟ್ರದಿಂದ ಉಚ್ಛಾಟಿಸಿ ಉತ್ತರಪ್ರದೇಶಕ್ಕೆ ಕಳುಹಿಸಿ ಕೊಡಿ. ಆತನಿಗೆ ಹೇಗೆ ಪಾಠ ಕಲಿಸಬೇಕೆಂಬುದು ನಮಗೆ ತಿಳಿದಿದೆ.

ಔರಂಗಜೇಬನ ಬಗ್ಗೆ ಮಾತನಾಡಿರುವ ಅಬು ಅಜ್ಮಿಯನ್ನು ಇಲ್ಲಿಗೆ ಕರೆತನ್ನಿ ನಾವು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಹಿಂದೂಗಳ ಮೇಲೆ ಜಜಿಯಾ ತೆರಿಗೆ ವಿಧಿಸಿ, ಬಾಯಾರಿದ ತಂದೆಗೆ ಗುಟುಕು ನೀರನ್ನು ನೀಡದ ಔರಂಗಜೇಬನನ್ನು ಸಮಾಜವಾದಿ ಪಕ್ಷ ಮಾದರಿಯಾಗಿ ಪರಿಗಣಿಸಿದೆ.

ಸಮಾಜವಾದಿ ಪಕ್ಷಕ್ಕೆ ಅವರ ಶಾಸಕರ ಮೇಲೆ ಹಿಡಿತವಿಲ್ಲವೆಂಬುದು ಸ್ಪಷ್ಟವಾಗಿದೆ. ಔರಂಗಜೇಬನ ಕುರಿತು ಹೇಳಿಕೆಗೆ ಸಂಬಂಧಿಸಿದಂತೆ ಪಕ್ಷವು ಕೂಡಲೇ ಹೇಳಿಕೆ ನೀಡಿದ ಶಾಸಕನನ್ನು ಉಚ್ಛಾಟಿಸಬೇಕು. ಪಕ್ಷವು ರಾಮ್ ಮನೋಹರ್ ಲೋಹಿಯಾ ಅವರ ಸಿದ್ಧಾಂತದಿಂದ ವಿಮುಖವಾಗುತ್ತಿದ್ದು, ದೇಶದ ಸಂಸ್ಕೃತಿಯನ್ನು ಪಾಲಿಸದಿದ್ದರೂ ಅಡ್ಡಿಯಿಲ್ಲ. ಆದರೆ, ಲೋಹಿಯಾ ಅವರ ಸಿದ್ಧಾಂತವನ್ನು ಪಾಲಿಸಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎಸ್​ಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಅಬು ಅಜ್ಮಿ ಹೇಳಿದ್ದೇನು? 

ಸೋಮವಾರ (ಮಾರ್ಚ್ 3) ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಮೊಘಲ್ ದೊರೆ ಔರಂಗಜೇಬನನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹೊಗಳಿದ್ದರು. ಔರಂಗಜೇಬನು ನ್ಯಾಯವನ್ನು ಪ್ರೀತಿಸುವ ರಾಜನಾಗಿದ್ದನು. ಅವನ ಅಧಿಕಾರಾವಧಿಯಲ್ಲಿ ಭಾರತವು ಚಿನ್ನದ ಹಕ್ಕಿಯಾಯಿತು. ನಾನು ಔರಂಗಜೇಬನನ್ನು ಕ್ರೂರ ಆಡಳಿತಗಾರ ಎಂದು ಪರಿಗಣಿಸುವುದಿಲ್ಲ. ಔರಂಗಜೇಬನ ಕಾಲದಲ್ಲಿ, ಆಡಳಿತಕ್ಕಾಗಿ ಹೋರಾಟ ನಡೆದಿತ್ತು, ಧರ್ಮಕ್ಕಾಗಿ ಅಲ್ಲ, ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ಹೋರಾಟ ಇರಲಿಲ್ಲ. ಔರಂಗಜೇಬನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ನಿರ್ಮಿಸಿದನು. ಔರಂಗಜೇಬನ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಅಬು ಅಜ್ಮಿ ಹೇಳಿದ್ದರು.

ಬಳಿಕ ಈ ಹೇಳಿಕೆ ವ್ಯಾಪಕ ಖಂಡನೆಗೆ ಗುರಿಯಾಗಿತ್ತು ಮತ್ತು ಶಾಸಕ ಅನು ಅಜ್ಮಿ ಅವರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿತ್ತು. ನಾನು ಛತ್ರಪತಿ ಶಿವಾಜಿ ಮಹಾರಾಜ್, ಸಂಭಾಜಿ ಮಹಾರಾಜ್ ಅಥವಾ ಇತರ ಯಾವುದೇ ಮಹಾನ್ ವ್ಯಕ್ತಿಗಳ ಬಗ್ಗೆ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಆದರೆ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನಾನು ನನ್ನ ಮಾತುಗಳನ್ನು, ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಶಾಸಕ ಅಬು ಅಜ್ಮಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net