

ಬೆಂಗಳೂರು: ಕಾಂಗ್ರೆಸ್ ಗೆ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ದ್ರೋಹ ಬಗೆದಿದ್ದಷ್ಟೇ ಅಲ್ಲ, ತಮ್ಮ ರಾಜಕೀಯ ಭವಿಷ್ಯವನ್ನು ತಾವೇ ಕೈಯಾರೆ ಹಾಳು ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತಮ್ಮ ಸಿಟ್ಟು ತೋಡಿಕೊಂಡರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಿಪಿವೈ ನಡೆ ಬಗ್ಗೆ ಅನುಮಾನವಿತ್ತು, ವಿಧಾನ ಪರಿಷತ್ ಸದಸ್ಯತ್ವಕ್ಕೆ ತರಾತುರಿಯಲ್ಲಿ ರಾಜೀನಾಮೆ ನೀಡಿದರೂ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು, ಟಿಕೆಟ್ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆವು ಎಂದರು.
ಚನ್ನಪಟ್ಟಣ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸಿದ ಕ್ಷೇತ್ರ. ಹೀಗಾಗಿ ಅವರೇ ನಿರ್ಣಯವೇ ಮುಖ್ಯ. ಮೈತ್ರಿಧರ್ಮವನ್ನು ಉಭಯ ಪಕ್ಷಗಳು ಪಾಲಿಸುತ್ತಿವೆ. ಯೋಗೇಶ್ವರ್ ಕಾಂಗ್ರೆಸ್ ನಾಯಕರೊಂದಿಗೆ ಕುಮಾರಸ್ವಾಮಿಗೆ ಗೊತ್ತಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂಪರ್ಕಿಸಿದ ವೇಳೆ ಈ ವಿಷಯ ತಿಳಿಸಿದ್ದರು.
ಬಿಜೆಪಿ ತೊರೆಯುವ ಸಂಶಯವಿದ್ದಾಗ್ಯೂ ಜೆಡಿಎಸ್ ನಿಂದ ಸ್ಪರ್ಧಿಸುವ ಆಫರ್ ನೀಡಿದರು. ಆದರೆ ಯೋಗೇಶ್ವರ್ ಇದನ್ನು ತಿರಸ್ಕರಿಸಿ ತಮ್ಮ ಪೂರ್ವ ನಿರ್ಧಾರದಂತೆ ಕಾಂಗ್ರೆಸ್ ಸೇರಿದ್ದಾರೆ. ಆ ಮೂಲಕ ರಾಜಕೀಯವಾಗಿ ಬೆಳೆಯುವ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ವಿಶ್ಲೇಷಿಸಿದರು.
ಪಕ್ಷೇತರ, ಸಮಾಜವಾದಿ ಪಕ್ಷ, ನಂತರ ಬಿಜೆಪಿಗೆ ಬಂದಿದ್ದ ಯೋಗೇಶ್ವರ್ ಕಾಂಗ್ರೆಸ್ ಗೆ ಮರಳಿದ್ದಾರೆ. ಇದರಿಂದ ಬಿಜೆಪಿಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ. ಕ್ಷೇತ್ರದಲ್ಲಿ ಅನಗತ್ಯವಾಗಿ ಸೃಷ್ಟಿಯಾಗಿದ್ದ ಗೊಂದಲ ತಿಳಿಯಾಗಿ ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದರು.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಯೋಗೇಶ್ವರ್ ಒಬ್ಬರೇ ಕಾರಣವಲ್ಲ. ಜೆಡಿಎಸ್, ಕಾಂಗ್ರೆಸ್ ನ ಅನೇಕ ಶಾಸಕರು ಬೇರೆ ಬೇರೆ ನಾಯಕರ ಮೂಲಕ ಬಿಜೆಪಿಗೆ ಬಂದು, ಅಧಿಕಾರಕ್ಕೆ ತಂದಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.
ಎಚ್.ಡಿ.ಕುಮಾರಸ್ವಾಮಿಗೆ ಮೊಬೈಲ್ ನಲ್ಲಿ ಸಂಪರ್ಕಿಸಿದ ಆರ್.ಅಶೋಕ್, ಎನ್ ಡಿಎ ಅಭ್ಯರ್ಥಿ ಅಂತಿಮಗೊಳಿಸಲು ಕೋರಿದ್ದು, ಇಂದು ಸಂಜೆ ಸಭೆ ಸೇರೋಣ ಬ್ರದರ್ ಎಂದು ಎಚ್ ಡಿಕೆ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕುಳಿತು ಚರ್ಚಿಸಿ ಅಭ್ಯರ್ಥಿಯನ್ನು ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.