

| ನವೀನ್ 19 ವರ್ಷ ಹಾವೇರಿ
ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಆತಂಕ, ಒತ್ತಡ, ಅಧ್ಯಯನ ಮಾಡಿದ್ದನ್ನು ನೆನಪಿಟ್ಟುಕೊಳ್ಳಲು ಮತ್ತು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿದ್ರೆಯ ಕೊರತೆ, ಕಡಿಮೆ ಏಕಾಗ್ರತೆ, ಕಡಿಮೆ ಶಕ್ತಿ ಮತ್ತು ಸಾಮಾನ್ಯ ಆಯಾಸ ಸೇರಿದಂತೆ ಕೆಲವು ಕಾರಣಗಳಿಂದಾಗಿ, ನೀವು ಪ್ರಮುಖ ಪರೀಕ್ಷೆ ಎದುರಿಸುವಾಗ ಶಾಂತವಾಗಿರುವುದು ಸುಲಭವಲ್ಲ. ಆದರೆ ನಿಮ್ಮ ಮನಸ್ಸನ್ನು ಆರಾಮವಾಗಿ ಕೇಂದ್ರೀಕರಿಸಲು ಮಾರ್ಗಗಳಿವೆ. ಪರೀಕ್ಷೆಯ ದಿನಗಳಲ್ಲಿ ಸಾಗಲು ನಿಮಗೆ ಸಹಾಯ ಮಾಡುವ ಕೆಲವು ಯೋಗ ಆಸನಗಳು ಮತ್ತು ಉಸಿರಾಟದ ವ್ಯಾಯಾಮಗಳು ಇಲ್ಲಿವೆ. ಅನೇಕ ಯೋಗ ಭಂಗಿಗಳು ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತವೆ ಮತ್ತು ಗಮನವನ್ನು ಸುಧಾರಿಸುವ ಮೂಲಕ ಕಲಿಕೆಯ ಗರಿಷ್ಠ ಮಟ್ಟದ ಜಾಗರೂಕತೆಯನ್ನು ತಲುಪಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.
ಯೋಗಾಸನಗಳು: ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ಉತ್ಥಾನಾಸನ, ಕುಳಿತುಕೊಂಡು ವಿಶ್ರಾಂತಿ, ಪದ್ಮಾಸನ, ವಜ್ರಾಸನ, ಶಶಾಂಕಾಸನ, ಉಷ್ಟ್ರಾಸನ, ವಕ್ರಾಸನ, ಸರ್ವಾಂಗಾಸನ, ಶೀರ್ಷಾಸನ, ಹಲಾಸನ, ಮಕರಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಶವಾಸನ.
ನಾಡೀ ಶುದ್ಧಿ ಪ್ರಾಣಾಯಾಮ /ಸಿತ್ಕಾರಿ ಪ್ರಾಣಾಯಾಮ, ಬ್ರಾಮರೀ ಪ್ರಾಣಾಯಾಮ ಮಾಡಬಹುದು. ಹಾಗೆಯೇ ಉದ್ರೇಕಕಾರೀ ಆಹಾರಕ್ಕಿಂತ ಸಾತ್ವಿಕ ಆಹಾರ, ದಿನಾಲು ಹತ್ತು ನಿಮಿಷ ಸಾಮಾನ್ಯ ಉಸಿರಾಟವನ್ನು ಗಮನಿಸುವ ಧ್ಯಾನ ಮಾಡಿ. ನಿಯಮಿತವಾದ ಧ್ಯಾನದಿಂದ ಒತ್ತಡ ಮತ್ತು ಆತಂಕ ದೂರವಾಗುತ್ತದೆ.
ಪರೀಕ್ಷೆಯ ಒತ್ತಡವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡಬಹುದಾದ ಅಂಶಗಳು ಹೀಗಿವೆ: ಚೆನ್ನಾಗಿ ತಿನ್ನಿರಿ, ನಿದ್ದೆ ಮಾಡಿ ಮತ್ತು ವ್ಯಾಯಾಮ, ಯೋಗ ಮಾಡಿ. ಆತಂಕದ ಭಾವನೆ ಬಿಟ್ಟು ನೀವೇ ಹೆಜ್ಜೆ ಹಾಕಿ ನಿಮ್ಮನ್ನು ನಂಬಿರಿ. ನೀವು ಕಷ್ಟ ಪಡುತ್ತಿರುವಿರಿ ಎಂದು ನೀವು ಭಾವಿಸಿದರೆ ಯಾರೊಂದಿಗಾದರೂ ಮಾತನಾಡಿ.
ಚಿನ್ಮುದ್ರೆಯ ಕುರಿತಾದ ಮಾಹಿತಿ ತಿಳಿಸುವಿರಾ?
| ಲತಾ 18 ವರ್ಷ ಬೆಂಗಳೂರು
ಎರಡೂ ಕೈಗಳನ್ನು ಮೇಲ್ಮುಖವಾಗಿ ಇಟ್ಟು ಆಯಾ ಕೈಗಳ ತೋರು ಬೆರಳಿಗೆ ಹೆಬ್ಬೆರಳಿನ ತುದಿಯನ್ನು ತಾಗಿಸಿ, ಉಳಿದ ಮೂರು ಬೆರಳುಗಳು ನೇರವಾಗಿರಲಿ. ಜ್ಞಾನ ಮುದ್ರೆಯಲ್ಲಿ ಹೆಬ್ಬೆರಳು ಅಗ್ನಿ ತತ್ವ, ತೋರು ಬೆರಳು ವಾಯು ತತ್ವ ಜೊತೆಯಾದಾಗ ಮನಸ್ಸು ಶಾಂತಗೊಳ್ಳುತ್ತದೆ. ಹೆಬ್ಬೆರಳು ಇಲ್ಲಿ ಮನಸ್ಸಿಗೆ ಸಂಬಂಧಪಟ್ಟದ್ದಾಗಿದೆ. ತೋರು ಬೆರಳಿನ ವಾಯು ತತ್ವ ಮನಸ್ಸಿನ ಚಂಚಲತೆಗೆ ಸಂಬಂಧ ಪಟ್ಟದ್ದಾಗಿದೆ. ಅಗ್ನಿ ಮತ್ತು ವಾಯು (ಹೆಬ್ಬೆರಳು+ತೋರು ಬೆರಳು) ಜತೆಯಾದಾಗ ಮನಸ್ಸು ಸ್ಥಿರಗೊಂಡು ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ನಾಡಿಗಳಲ್ಲಿ ಶಕ್ತಿ ಬಲವಾಗಿ ಸಂಚರಿಸುತ್ತದೆ. ಉದ್ವೇಗ, ಭಯ, ಒತ್ತಡ, ಮಾನಸಿಕ ಚಂಚಲತೆ ದೂರವಾಗುತ್ತದೆ.ಮನಸ್ಸನ್ನು ಆರಾಮಗೊಳಿಸುತ್ತದೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಯೋಗಾಸನಗಳಲ್ಲಿ ಪದ್ಮಾ ಸನ, ವಜ್ರಾಸನ, ವೀರಾಸನ ಸುಖಾಸನ ಇತ್ಯಾದಿ ಆಸನಗಳಲ್ಲಿ ಈ ಮುದ್ರೆ ಬಳಸುತ್ತಾರೆ. ಈ ಮುದ್ರೆಯನ್ನು ಸಾಮಾನ್ಯವಾಗಿ ಎಷ್ಟು ಹೊತ್ತು ಮಾಡಬಹುದು ಎಂಬ ಪ್ರಶ್ನೆ ಬರುವುದು ಸಹಜ. ಏಕಾಗ್ರತೆ ಮತ್ತು ನೆನಪಿನ ಶಕ್ತಿಗಾಗಿ ಚಿನ್ಮುದ್ರೆ ಯಲ್ಲಿ ಐಂ ಹ್ರೀಂ ಐಂ ಹ್ರೀಂ ಓಂ ಸರಸ್ವತೈ ನಮಃ ಯಾ ಓಂ ಸರಸ್ವತೈ ನಮಃ ಎಂದು 108 ಬಾರಿ ಪಠಿಸಿ ಅಥವಾ ಇಷ್ಟ ದೇವರನ್ನು ಸ್ಮರಣೆ ಮಾಡಿ. ಅದರಿಂದ ಮಾನಸಿಕ ನೆಮ್ಮದಿ ಹಾಗೂ ಏಕಾಗ್ರತೆ ಸಾಧ್ಯ.