ಪ್ರತ್ಯಾಹಾರದಿಂದ ಜ್ಞಾನೇಂದ್ರಿಯಗಳ ನಿಯಂತ್ರಣ ಸಾಧ್ಯ

Prathyahara
Published on
ಯಮ-ನಿಯಮಗಳ ಅನುಷ್ಠಾನದಿಂದ ಸಾಮಾಜಿಕ ಹಾಗೂ ವೈಯಕ್ತಿಕ ಶಾಂತಿ ಪಡೆದು, ಆಸನಾಭ್ಯಾಸದಿಂದ ಶಾರೀರಿಕ ದೃಢತೆ- ಮಾನಸಿಕ ಸುಖಗಳಿಸಿ, ಪ್ರಾಣಾಯಾಮದಿಂದ ಚಿತ್ತಸ್ಥೈರ್ಯವನ್ನು ಸಾಧಿಸಿದ ಮೇಲೆ, ಆ ಚಿತ್ತಸ್ಥೈರ್ಯದಿಂದ ಬಾಹ್ಯ ಸಂಸರ್ಗದಿಂದ ದೂರವಾಗಿ, ಚಿತ್ತವು ಒಳಮುಖವಾಗಿ ಬೆಳೆಯುವಂತೆ ಮಾಡಬಹುದಾಗಿದೆ. ಮನಸ್ಸೆಂಬ ಕೆರೆಯ ಶಕ್ತಿಯೆಂಬ ನೀರನ್ನು ಹುಚ್ಚು ಹುಚ್ಚಾಗಿ ಹರಿಯ ಬಿಡುವ ತೂಬುಗಳೇ ಜ್ಞಾನೇಂದ್ರಿಯಗಳು. ಈ ಜ್ಞಾನೇಂದ್ರಿಯಗಳ ವಿಷಯ ಸಂಬಂಧವೆಂಬ ಬಾಯನ್ನು ಮುಚ್ಚಿ, ಅವುಗಳ ಶಕ್ತಿಯನ್ನು ಮನಸ್ಸಿಗೆ ಹಿಂದಿರುಗಿಸುವುದೇ ಪ್ರತ್ಯಾಹಾರ. ಮಹರ್ಷಿ ಪತಂಜಲಿಯು ಯೋಗ ಸೂತ್ರದಲ್ಲಿ ಹೇಳುತ್ತಾರೆ. - ‘ ಸ್ವವಿಷಯಾ ಸಂಪ್ರಯೋಗೇ ಚಿತ್ತಸ್ಯ ಸ್ವರೂಪಾನುಕಾರ ಇವೇಂದ್ರಿಯಾಣಾಂ ಪ್ರತ್ಯಾಹಾರಃ’ ಎಂದರೆ ತಮ್ಮ ತಮ್ಮ ವಿಷಯಗಳ ಸಂಪರ್ಕವನ್ನು ಹೊಂದದೆ, ಇಂದ್ರಿಯಗಳು ಚಿತ್ತದ ಸ್ವರೂಪವನ್ನು ಅನುಕರಿಸುವಂತೆ ಇರುವುದೇ ಪ್ರತ್ಯಾಹಾರವೆನಿಸುತ್ತದೆ.

ಮಹರ್ಷಿ ಕಣಾದರು ವೈಶೇಷಿಕ ದರ್ಶನದಲ್ಲಿ ಮನಸ್ಸಿನ ಮತ್ತು ಇಂದ್ರಿಯಗಳ ಪರಸ್ಪರ ಸಂಬಂಧ ಹಾಗೂ ಲಕ್ಷಣವನ್ನು ಸ್ಪಷ್ಟಪಡಿಸಿದ್ದಾರೆ. ‘ಜೀವಾತ್ಮ ಇಂದ್ರಿಯಗಳು ಮತ್ತು ಅವುಗಳ ವಿಷಯಗಳು ಪರಸ್ಪರ ಸಂಪರ್ಕ ಹೊಂದಿರುವಾಗಲೂ ಕೂಡ ಒಂದೊಂದು ಸಾರಿ ಅದರ ಜ್ಞಾನವುಂಟಾಗುವುದು ಒಂದೊಂದು ಸಾರಿ ಉಂಟಾಗದಿರವುದು - ಇದೇ ಮನಸ್ಸಿನ ಕುರುಹು’ ಎಂದು ಹೇಳಿದ್ದಾರೆ.

ಮನಸ್ಸಿನ ಸಹಕಾರದಿಂದ, ಇಂದ್ರಿಯಗಳು ಬಾಹ್ಯ ಜಗತ್ತಿನೊಂದಿಗೆ ನಮ್ಮ ಸಂಪರ್ಕವನ್ನು ಕಲ್ಪಿಸುತ್ತವೆ. ಆ ಸಂಪರ್ಕದಿಂದ, ಒಳ್ಳೆಯ ಅಥವಾ ಕೆಟ್ಟ ಪ್ರತಿಕ್ರಿಯೆಯನ್ನು ಮನಸ್ಸು ತೋರುತ್ತವೆ. ಆ ಪ್ರತಿಕ್ರಿಯೆ ನಮಗೆ ಅಹಿತವೆನಿಸಿದರೆ, ದುಃಖವೆಂದುಕೊಳ್ಳುತ್ತೇವೆ. ‘ಹಿತ’ ವೆನಿಸಿದರೆ, ಸುಖವೆಂದುಕೊಳ್ಳುತ್ತೇವೆ. ಈ ಕುರಿತು ಯೋಗೇಶ್ವರ ಕೃಷ್ಣನು ಹೇಳಿಯೇ ಇದ್ದಾನೆ. ‘ಪ್ರತಿಯೊಂದು ಇಂದ್ರಿಯದ ವಿಷಯದಲ್ಲಿಯೂ ರಾಗದ್ವೇಷಗಳು ಇದ್ದೇ ಇವೆ. ಆ ರಾಗದ್ವೇಷಗಳಿಗೆ ವಶನಾಗಬಾರದು. ಏಕೆಂದರೆ- ಅವು ಆತ್ಮನ ವೈರಿಗಳು’. ಇದನ್ನೇ ನಾವು ಪಾತಂಜಲ ಯೋಗ ದರ್ಶನದಲ್ಲಿ ಬೇರೊಂದೆಡೆ ಓದುವಂತೆ- ‘ಸುಖಾನುಶಯೀ ರಾಗಃ|| ದುಃಖಾನುಶಯೀ ದ್ವೇಷಃ||’ ಎಂದರೆ - ‘ಸುಖವನ್ನು ಬಲ್ಲವನಿಗೆ,

ಸುಖದ ಸ್ಮರಣದಿಂದ ಸುಖದಲ್ಲಾಗಲೀ, ಅದರ ಸಾಧನದಲ್ಲಾಗಲೀ ಹುಟ್ಟುವ ಆಸೆ, ತೃಷ್ಣಾ ಅಥವಾ ಲೋಭಕ್ಕೆ ರಾಗವೆಂದು ಹೆಸರು. ದುಃಖವನ್ನು ಬಲ್ಲವನಿಗೆ, ದುಃಖದ ಸ್ಮರಣದಿಂದ ದುಃಖದಲ್ಲಾಗಲೀ, ಅದರ ಸಾಧನದಲ್ಲಾಗಲಿ ಹುಟ್ಟುವ ವಿರೋಧ ತಾಪ, ಹಿಂಸೆ ಅಥವಾ ಕ್ರೋಧವನ್ನು ದ್ವೇಷವೆನ್ನುತ್ತಾರೆ’ - ಎಂದು ವ್ಯಾಸ ಭಾಷ್ಯದಲ್ಲಿ ಹೇಳಿದ್ದಾರೆ. ಸುಖ ಮತ್ತು ದುಃಖ - ಎಂಬೀ ಶಬ್ದಗಳೇ ಇಂದ್ರಿಯಗಳ ತೀವ್ರ ಸಂಬಂಧವನ್ನು ಸೂಚಿಸುತ್ತಿವೆ. ‘ಖ’ ಎಂಬುದಕ್ಕೆ ‘ಇಂದ್ರಿಯ’ ಎಂಬರ್ಥವಿದೆ. ’ಸು’ ಎಂದರೆ ಒಳ್ಳೆಯದು. ಸು+ಖ = ಸುಖ. ಇಂದ್ರಿಯಕ್ಕೆ ಹಿತವೆಂದು ತೋರುವುದೇ ಸುಖ, ದುಃ+ಖ = ದುಃಖ; ಇಂದ್ರಿಯಕ್ಕೆ ಕೆಟ್ಟದಾಗಿ ತೋರುವುದೇ ದುಃಖ. ಇಂದ್ರಿಯವೇ ಇಲ್ಲದಿದ್ದರೆ ಅದರ ವಿಷಯದಿಂದ ನಮಗೆ ಸುಖವೂ ಇಲ್ಲ, ದುಃಖವೂ ಇಲ್ಲ. ‘ರಾಗ-ದ್ವೇಷಗಳಿಂದ ಮುಕ್ತರಾಗಬೇಕಾದರೆ, ಇಂದ್ರಿಯಗಳನ್ನು ಅವುಗಳ ಅರ್ಥಗಳಿಂದ ಅಂದರೆ ಕಣ್ಣನ್ನು ರೂಪದಿಂದಲೂ, ಕಿವಿಯನ್ನು ಶಬ್ದದಿಂದಲೂ, ಮೂಗನ್ನು ವಾಸನೆಯಿಂದಲೂ, ನಾಲಿಗೆಯನ್ನು ರಸದಿಂದಲೂ, ಚರ್ಮವನ್ನು ಸ್ಪರ್ಶದಿಂದಲೂ ದೂರವಿಟ್ಟು, ಅವು ಚಿತ್ತವನ್ನು ಅನುಕರಿಸುವಂತೆೆ ಮಾಡುವುದೇ ನಿಜವಾದ ಪ್ರತ್ಯಾಹಾರ’. ಅಂದರೆ ಚಿತ್ತದಲ್ಲಿ ಆತ್ಮತತ್ತ್ವದ ಬಗ್ಗೆ ಚಿಂತನೆ ಮಾಡುವ ಶಕ್ತಿಯಿದೆ. ಅದು ಅಂತಮುಖವಾದಲ್ಲಿ ಪರಮಾತ್ಮನ ಚಿಂತನದಲ್ಲಿ ಲೀನವಾಗಬಲ್ಲುದು.

ಇಂದ್ರಿಯಾತೀತನಾದ, ಅತೀಂದ್ರಿಯ ವಿಷಯವಾದ ಪರಮಾತ್ಮನು, ಇಂದ್ರಿಯಗಳ ಹಿಡಿತಕ್ಕೆ ಸಿಕ್ಕಲಾರನಾದ ಕಾರಣ. ಇಂದ್ರಿಯಗಳು ಅವನನ್ನು ಹಿಡಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೇ ಕಾರಣದಿಂದ ಪತಂಜಲಿಯು ‘ಚಿತ್ತದ ಸ್ವರೂಪದ ಅನುಕರಣೆ’- ಎಂದು ಹೇಳಿರುವುದು. ಅನುಕರಣೆಯಂತೆ ಎಂದು ಹೇಳಿದ್ದಾರೆ. ಚಿತ್ತದಂತೆ ಆತ್ಮವು ಚಿಂತನದಲ್ಲಿ ತೊಡಗುವುದಿಲ್ಲ. ಕೇವಲ ಚಿತ್ತದಂತೆ ಇಂದ್ರಿಯಗಳು ಬಹಿರ್ವ್ಯಾಪಾರದಿಂದ ಮುಕ್ತವಾಗುವುದಷ್ಟೇ ಪ್ರತ್ಯಾಹಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net