

ಸಮಷ್ಟಿಜೀವದಿಂದ ಉದಯಿಸಿರುವ ವ್ಯಷ್ಟಿಜೀವಗಳು ವಿಕಾಸ ಹೊಂದುವ ರೀತಿಯನ್ನು ಶ್ರೀ ವಸಿಷ್ಠರು ಹೇಳಲಾರಂಭಿಸಿದ್ದಾರೆ. ವ್ಯಷ್ಟಿಜೀವಗಳ ಸೂಕ್ಷ್ಮಶರೀರಗಳಲ್ಲಿ ಚಕ್ಷುರಿಂದ್ರಿಯ, ಸ್ಪರ್ಶನೇಂದ್ರಿಯ, ಶ್ರೋತ್ರೇಂದ್ರಿಯ, ಘ್ರಾಣೇಂದ್ರಿಯ, ರಸನೇಂದ್ರಿಯಗಳು ಸೂಕ್ಷ್ಮರೂಪದಿಂದ ಹುಟ್ಟಿಕೊಳ್ಳುತ್ತವೆ. ಈ ಇಂದ್ರಿಯಗಳು ಸೂಕ್ಷ್ಮಶರೀರದಲ್ಲಿ ಸೂಕ್ಷ್ಮರೂಪದಿಂದ ಇರುತ್ತವೆ. ಸಾಮಾನ್ಯವಾಗಿ ಸೂಕ್ಷ್ಮಶರೀರವೆಂದರೆ ಮನಸ್ಸು ಎನ್ನಬಹುದು. ಎಲ್ಲ ಇಂದ್ರಿಯಗಳೂ ಮನಸ್ಸಿನಲ್ಲಿಯೇ ಸೂಕ್ಷ್ಮರೂಪದಲ್ಲಿ ಇರುವುದರಿಂದ ಸ್ವಪ್ನದಲ್ಲಿ ಇಂದ್ರಿಯಗಳ ಇರುವಿಕೆಯ ಅನುಭವವಾಗುತ್ತದೆ. ಪ್ರಕೃತ ಅವು ಸೂಕ್ಷ್ಮಶರೀರದಲ್ಲಿ ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದನ್ನು ಹೇಳಿದ್ದಾರೆ. ಈಗ ಆ ಸೂಕ್ಷ್ಮಶರೀರದ ಇನ್ನೊಂದು ಭಾಗವಾದ ಪ್ರಾಣದ ಉತ್ಪತ್ತಿಯನ್ನು ವಸಿಷ್ಠರು ಹೇಳುತ್ತಿದ್ದಾರೆ.
‘ಜೀವ ಎಂಬ ಹೆಸರುಳ್ಳ, ಹಿಂದೆ ಹೇಳಿದಂಥ ಬೆಳವಣಿಗೆಯುಳ್ಳ, ಆತಿವಾಹಿಕ ಶರೀರವುಳ್ಳ ಮತ್ತು ಚಿತ್ತದೇಹದ ಆಕಾಶಾಕಾರವುಳ್ಳ ಆ ಜೀವನು ಬ್ರಹ್ಮಾಂಡವನ್ನೊಮ್ಮೆ ನೋಡುತ್ತಾನೆ. ಕೋಟಿ ಕೋಟಿ ಜೀವಗಳ ಸಮಷ್ಟಿಯೇ ಬ್ರಹ್ಮಾ (ಹಿರಣ್ಯಗರ್ಭ). ಅದೇ ಹಿರಣ್ಯಗರ್ಭನಲ್ಲೇ ಬೆಂಕಿಯ ಕಿಡಿಯಂಥ ಸೂಕ್ಷ್ಮಸ್ವರೂಪದಿಂದ ಜೀವಗಳ ಬೆಳವಣಿಗೆ ಆರಂಭವಾಗಿದೆ. ಎಲ್ಲ ಜೀವಗಳ ಬೆಳವಣಿಗೆ ಪ್ರಕ್ರಿಯೆಯಿಂದ ಆ ಹಿರಣ್ಯಗರ್ಭನು ಬ್ರಹ್ಮಾಂಡವೆಂಬ ಶರೀರವುಳ್ಳವನಾಗಿದ್ದಾನೆ. ಇಂಥ ಸಮಷ್ಟಿ ಜೀವವಾದ ಹಿರಣ್ಯಗರ್ಭನನ್ನು ವ್ಯಷ್ಟಿ ಜೀವನು ಒಮ್ಮೆ ನೋಡುತ್ತಾನೆ. ವ್ಯಷ್ಟಿಜೀವನಿಗೆ ಅತ್ಯಂತ ಹತ್ತಿರದಲ್ಲೇ ಆ ಸಮಷ್ಟಿಜೀವ ಬ್ರಹ್ಮಾಂಡಶರೀರಧಾರಿಯಾಗಿ ನಿಂತಿದ್ದಾನೆ. ಅನೇಕ ಆವರಣಗಳುಳ್ಳ ಹಿರಣ್ಯಗರ್ಭನನ್ನು ವ್ಯಷ್ಟಿಜೀವ ನೋಡುತ್ತಾನೆ. ನೋಡಿದಾಗ ಅವನಿಗೆ ಏನು ಕಂಡಿತು? ಒಬ್ಬ ವ್ಯಷ್ಟಿಜೀವನಿಗೆ ನೀರಿನಲ್ಲಿರುವ ಬ್ರಹ್ಮಾಂಡಶರೀರ ಕಂಡರೆ ಮತ್ತೊಬ್ಬ ವ್ಯಷ್ಟಿಜೀವನಿಗೆ ಚತುಮುಖ ಬ್ರಹ್ಮನ ಶರೀರ ಕಂಡಿತು. ಹೇಗೆ ಕಂಡಿತು? ‘ಆ ಬ್ರಹ್ಮಾಂಡಶರೀರವೇ ನಾನು’, ‘ನಾನು ಆ ಬ್ರಹ್ಮಾಂಡಶರೀರಕ್ಕಿಂತ ಬೇರೆಯಲ್ಲ’ ಎಂದು ಮೊದಲ ವ್ಯಷ್ಟಿಜೀವನಿಗೆ ಕಂಡಿತು. ‘ಆ ಚತುಮುಖ ಬ್ರಹ್ಮನಿಗಿಂತ ನಾನು ಬೇರೆಯಲ್ಲ’ ಎಂದು ಎರಡನೆಯ ವ್ಯಷ್ಟಿಜೀವನಿಗೆ ಕಂಡಿತು. ಹೀಗೆ ಎರಡು ವಿಧದ ದರ್ಶನಗಳಾದವು. ಅಲ್ಲದೆ ಮುಂದೆ ಬರಲಿರುವ ಬ್ರಹ್ಮಾಂಡಾಂತರ್ಗತ ಲೋಕಗಳ ಸಹಿತ ಬ್ರಹ್ಮಾಂಡವನ್ನು ಆ ವ್ಯಷ್ಟಿಜೀವಗಳು ನೋಡಿದವು, ಅನುಭವಿಸಿದವು.’
‘ಮುಂದೆ ಬರಲಿರುವ ಲೋಕಗಳ ಸಹಿತ ಬ್ರಹ್ಮಾಂಡ ಹೇಗಿದೆ? ತಾನೇ ಚಿತ್ತ ಎಂಬಂತೆ ಚಿತ್ತದಲ್ಲಿ ತಾದಾತ್ಮ್ಯಾವವಿದೆ. ಅಂಥ ಚಿತ್ತದಿಂದ ಸಂಕಲ್ಪಾನುಸಾರ ಈ ಬ್ರಹ್ಮಾಂಡ ಸೃಷ್ಟಿಸಲ್ಪಟ್ಟಿದೆ. ಅದೇ ಬ್ರಹ್ಮಾಂಡವೇ ಮುಂದೆ ತನಗೆ ಗರ್ಭಗೃಹವಾಸ ಮುಂತಾದವುಗಳನ್ನು ತಂದಿಡುತ್ತದೆ. ಅಂದರೆ ಜನ್ಮ-ಜರಾ-ಮರಣ-ಪುನರ್ಜನ್ಮವೆಂಬ ಸಂಸಾರಸರಪಣಿಯನ್ನು ತಂದಿಡುತ್ತದೆ. ಅಲ್ಲದೆ ದೇಶ-ಕಾಲ- ಕ್ರಿಯೆಗಳಿಗೆ ಅನುಸಾರವಾಗಿ ಈ ಬ್ರಹ್ಮಾಂಡ ದ್ರವ್ಯ(ವಸ್ತು)ಗಳ ಕಲ್ಪನೆಯುಳ್ಳದ್ದಾಗಿದೆ. (ದೇಶ ಎಂದರೆ ಎಲ್ಲಿ, ಕಾಲ ಎಂದರೆ ಯಾವಾಗ, ಕ್ರಿಯೆ ಎಂದರೆ ಯಾವ ಪೂರ್ವಕರ್ಮಕ್ಕನುಸಾರ ಎಲ್ಲೆಲ್ಲಿ ಯಾವ್ಯಾವ ವಸ್ತುಗಳ ಸೃಷ್ಟಿಯಾಗಬೇಕೆಂಬ ನಿಯಮಕ್ಕನುಸಾರವಾಗಿ ಬ್ರಹ್ಮಾಂಡದ ಸೃಷ್ಟಿ.) ಇದರ ಬಗ್ಗೆ ತಿಳಿವಳಿಕೆಯನ್ನು ಒಮ್ಮೆ ಮನಸ್ಸಿಗೆ ತಂದುಕೊಂಡು ಆ ಜೀವಚೇತನನು ತನ್ನನ್ನೇ ತಾನು ಆ ಬ್ರಹ್ಮಾಂಡಕ್ಕೆ ಕಟ್ಟಿಕೊಳ್ಳುತ್ತಾನೆ. (ತಾನು, ತನ್ನದು ಎಂಬ ಭಾವವನ್ನು ಬೆಳೆಸಿಕೊಳ್ಳುತ್ತಾನೆ.) ಮುಂದೆ ಒಂದೊಂದು ವಸ್ತುಗಳಿಗೆ ಒಂದೊಂದು ಹೆಸರು ಬರುತ್ತದೆ. ಇದೇ ಜೀವಚೇತನನೇ ಆ ಹೆಸರಿನ ನಿರ್ವತೃ. ಆ ಹೆಸರುಗಳಿಗೆ ತಾನು ಕಟ್ಟಿಬೀಳುತ್ತಾನೆ. (ಹೆಸರು ಎಂದರೆ ಶಬ್ದಗಳು. ಶಬ್ದಗಳ ಬಗ್ಗೆಯೂ ಜೀವನಿಗೆ ಅಭಿಮಾನವಿರುತ್ತದೆ.) ಆತಿವಾಹಿಕ ದೇಹವುಳ್ಳ ಜೀವನು ಹೀಗೆ ಪರಮಾರ್ಥ ಸತ್ಯವಲ್ಲದ ಜಗತ್ತೆಂಬ ಭ್ರಮೆಯಲ್ಲಿ ಕಟ್ಟಿಬೀಳುತ್ತಾನೆ. ಸ್ವಪ್ನದಲ್ಲಿ ತಾನು ಆಕಾಶದಲ್ಲಿ ಹಾರುತ್ತಿರುವಂತೆ ತೋರುತ್ತದೆ. ಹಾಗೆಯೇ ಪರಮಾರ್ಥಸತ್ಯವಲ್ಲದ ಜಗತ್ತಿನಲ್ಲಿ ಜೀವನು ಸುತ್ತುತ್ತಾನೆ.’