

ಶ್ರೀ ವಸಿಷ್ಠರು ಈ ಹಿಂದೆ ಪಂಚತನ್ಮಾತ್ರೆಗಳು ಪರಬ್ರಹ್ಮದಲ್ಲಿಯೇ ತೋರಿಕೊಂಡಿದ್ದರೂ ಪರಮಾರ್ಥಸತ್ಯವಲ್ಲ ಎಂಬುದನ್ನು ತಿಳಿಸಿದ್ದಾರೆ. ಅವು ಪರಬ್ರಹ್ಮಕ್ಕಿಂತ ಬೇರೆಯಲ್ಲ. ಅವುಗಳಿಗೆ ಪರಬ್ರಹ್ಮಕ್ಕಿಂತ ಬೇರೆ ಅಸ್ತಿತ್ವವಿಲ್ಲ ಎಂದು ತಾತ್ಪರ್ಯ. ಈಗೊಂದು ಚಿಕ್ಕ ಪ್ರಶ್ನೆ - ಪರಬ್ರಹ್ಮದಲ್ಲೇ ತೋರಿಕೊಂಡ ಪಂಚತನ್ಮಾತ್ರೆಗಳು ಪರಬ್ರಹ್ಮಕ್ಕಿಂತ ಬೇರೆಯಲ್ಲ. ಆದರೆ ಅನಂತರ ಪಂಚತನ್ಮಾತ್ರೆಗಳಿಂದ ಉತ್ಪತ್ತಿಯಾದ ಪ್ರಪಂಚಕ್ಕೆ ಬ್ರಹ್ಮಕ್ಕಿಂತ ಬೇರೆಯಿಲ್ಲ ಎಂಬ ಮಾತು ಹೇಗೆ ಅನ್ವಯವಾಗುತ್ತದೆ? ಈ ಪ್ರಶ್ನೆಗೆ ಉತ್ತರಿಸುವ ಮೂಲಕ ವಸಿಷ್ಠರ ಮಾತು ಮುಂದುವರಿಯುತ್ತದೆ.
ಬ್ರಹ್ಮ-ಪಂಚತನ್ಮಾತ್ರೆ-ಸ್ಥೂಲಪ್ರಪಂಚ ಈ ಮೂರನ್ನೂ ಒಟ್ಟಿಗಿಟ್ಟು ನೊಡೋಣ. ಬ್ರಹ್ಮಕ್ಕಿಂತ ಪಂಚತನ್ಮಾತ್ರೆ ಬೇರೆಯಲ್ಲದ್ದರಿಂದ ಮತ್ತು ಆ ಪಂಚತನ್ಮಾತ್ರೆಯಿಂದ ಸ್ಥೂಲಪ್ರಪಂಚವು ಬೇರೆಯಲ್ಲದ್ದರಿಂದ, ಬ್ರಹ್ಮಕ್ಕಿಂತ ಸ್ಥೂಲಪ್ರಪಂಚ ಬೇರೆಯಲ್ಲ. ಆದ್ದರಿಂದ ಚೆನ್ನಾಗಿ ಬೆಳೆದು ನಿಂತಿರುವ ಮೂರು ಲೋಕಗಳು ಬ್ರಹ್ಮವೇ ಆಗಿದೆ ಎಂದು ಸಿದ್ಧವಾಗುತ್ತದೆ.’
‘ಇಲ್ಲೊಂದು ಪ್ರಶ್ನೆ ಬರುತ್ತದೆ. ಕಾರಣ ಮತ್ತು ಕಾರ್ಯಗಳಿಗೆ ಐಕ್ಯವನ್ನು ಹೇಳಿದ ಮೇಲೆ ಇದು ಕಾರಣ, ಅದು ಕಾರ್ಯ ಎಂದು ಕಾರ್ಯ-ಕಾರಣಗಳನ್ನು ಬೇರೆಬೇರೆಯಾಗಿ ಗುರುತಿಸಲು ಗುರುತು ಯಾವುದು? ಇದಕ್ಕೆ ಉತ್ತರ - ಸೃಷ್ಟಿಕ್ರಮದ ಆರಂಭದಲ್ಲಿ ಪಂಚತನ್ಮಾತ್ರೆಗಳ ಸೃಷ್ಟಿ. ಅನಂತರ ಸ್ಥೂಲಪ್ರಪಂಚದ ಸೃಷ್ಟಿ. ಇವೆರಡೂ ಬ್ರಹ್ಮಕ್ಕಿಂತ ಬೇರೆಯಲ್ಲದಿದ್ದರೂ, ಬ್ರಹ್ಮವು ಮೊದಲು ಪಂಚತನ್ಮಾತ್ರೆಗಳ ರೂಪದಲ್ಲಿ ತೋರಿಕೊಳ್ಳುತ್ತದೆ. ಸ್ಥೂಲಪ್ರಪಂಚದ ರೂಪದಲ್ಲಿ ಅನಂತರ ತೋರಿಕೊಳ್ಳುತ್ತದೆ.
ಈ ಮೊದಲು-ನಂತರಗಳೇ ಕಾರಣ-ಕಾರ್ಯಗಳನ್ನೂ ಗುರುತಿಸುವ ಗುರುತುಗಳು. ಅನಂತರ ಬರುವ ಸ್ಥೂಲಪ್ರಪಂಚಕ್ಕೆ ಮೊದಲು ಬರುವ ಪಂಚತನ್ಮಾತ್ರೆಗಳ ಕಾರಣಗಳು. ಅನಂತರ ಬರುವ ಒಂದು ಬ್ರಹ್ಮರೂಪಕ್ಕೆ ಮೊದಲಿದ್ದ ಇನ್ನೊಂದು ಬ್ರಹ್ಮರೂಪ ಕಾರಣ. ಹಾಗೆ ನೋಡಿದರೆ ಅದೂ ಬ್ರಹ್ಮ ಇದೂ ಬ್ರಹ್ಮ. ಮತ್ತೆ ತನ್ನ ನಿಜಸ್ವರೂಪದಲ್ಲಿ ಆ ಬ್ರಹ್ಮ ಹುಟ್ಟು-ಸಾವುಗಳಿಲ್ಲದ್ದು. ಹಾಗಾಗಿ ಯಾವುದೂ ಹುಟ್ಟುವುದೂ ಇಲ್ಲ. ಆದರೂ ಜಗತ್ತಿನ ಈ ದೊಡ್ಡ ರಾಶಿ ಗೋಚರವಾಗುತ್ತದೆ.’
‘ವಸ್ತುತಃ ಇಲ್ಲದ್ದು ಇದ್ದದ್ದಾಗಿ ತೋರುವುದಕ್ಕೆ ಸ್ವಪ್ನ ಉತ್ತಮ ದೃಷ್ಟಾಂತ. ಸ್ವಪ್ನದಲ್ಲಿ ವಸ್ತುತಃ ಇಲ್ಲದ ಮಹಾನಗರ ಚೆನ್ನಾಗಿ ಇದ್ದದ್ದಾಗಿ ತೋರುತ್ತದೆ. ಹಾಗೆಯೇ ಈ ಜಗತ್ತು, ಈ ಜೀವ. ಬ್ರಹ್ಮವೆಂಬ ಪರಕಾಶದಲ್ಲಿ (ದಿವ್ಯ ಆಕಾಶದಲ್ಲಿ ಅಥವಾ ಶ್ರೇಷ್ಠವಾದ ವ್ಯಾಪಕ ಬೆಳಕಿನಲ್ಲಿ) ಜೀವಾಕಾಶವು (ಜೀವವೆಂಬ ಆಕಾಶದಂತಹ ಸೂಕ್ಷ್ಮವು ಅಥವಾ ಜೀವವೆಂಬ ಬೆಳಕು) ತೋರಿಕೊಂಡಿದೆ. ಒಂದೇ ಆತ್ಮನಲ್ಲೇ ಈ ಜೀವಾಕಾಶವು ತೋರಿಕೊಂಡಿದೆ.’ (ಇಲ್ಲಿ ಜೀವ ಎಂಬ ಶಬ್ದವನ್ನು ಓದುವಾಗ ನಾವೆಲ್ಲ ಜೀವಗಳೆಂಬುದು ನೆನಪಿರಬೇಕು.)
‘ಹೀಗೆ ಶುದ್ಧಸ್ವರೂಪಿಯಾದ ಜೀವನು ನೋಡುತ್ತಿದ್ದಾನೆ. ಅಂದರೆ ಪೃಥಿವ್ಯಾದಿಗಳು ಪರಮಾರ್ಥತಃ ಸತ್ಯವಲ್ಲದಿದ್ದರೂ, ಅವುಗಳನ್ನು ಇದ್ದವುಗಳನ್ನಾಗಿ ಅವನು ನೋಡುತ್ತಿದ್ದಾನೆ. ಹಾಗೆಯೇ ತನ್ನ ನಿಜಸ್ವರೂಪ ಶುದ್ಧಸ್ವರೂಪ(ಪರಬ್ರಹ್ಮ)ವಾಗಿದ್ದರೂ ಅವನು ತನ್ನನ್ನು ಜೀವನನ್ನಾಗಿ ನೋಡಿಕೊಳ್ಳುತ್ತಿದ್ದಾನೆ. ಎಲ್ಲವನ್ನೂ ವಸ್ತುತಃ ಒಂದೇ ಚೈತನ್ಯದಲ್ಲಿ ನೋಡುತ್ತಿದ್ದಾನೆ. ಹೀಗೆ ನಿನಗೆ ಜೀವಾತ್ಮನ ಸ್ವರೂಪವನ್ನು ಹೇಳಿದ್ದೇನೆ. ಆಕಾಶದಲ್ಲಿ ಆಕಾಶದಂತೆ ಉದಯಿಸಿದ ಜೀವಾತ್ಮನ ಬಗ್ಗೆ ಹೇಳಿದ್ದೇನೆ.’ (ಆಕಾಶದಿಂದ ಆಕಾಶದ ಉದಯವೆಂದರೆ ದೊಡ್ಡ ಆಕಾಶದಲ್ಲಿ ಘಟವೇ ಮೊದಲಾದ ಪರಿಮಿತಿಗೆ ಒಳಪಟ್ಟ ಚಿಕ್ಕ ಆಕಾಶದ ತೋರುವಿಕೆ. ವಿಸ್ತಾರವಾದ ಮನೆಯ ಒಳಗಿರುವ ಆಕಾಶ ದೊಡ್ಡ ಆಕಾಶವೆಂದಿಟ್ಟುಕೊಳ್ಳೋಣ.
ಮನೆ ಒಳಗೆ ಒಂದು ಘಟ ಇದ್ದರೆ ಆ ಘಟದ ಒಳಗೂ ಒಂದು ಚಿಕ್ಕ ಆಕಾಶವಿದೆ. ಅದು ಮನೆಯೊಳಗಿನ ಆಕಾಶದ ಒಂದು ಚಿಕ್ಕ ಭಾಗ. ಘಟ ಎಂಬ ಪರಿಮಿತಿ ಇದ್ದದ್ದರಿಂದ ಆ ಚಿಕ್ಕ ಆಕಾಶವು ಗುರುತಿಸಲ್ಪಡುತ್ತದೆ. ಹೀಗೆ ಪ್ರತ್ಯೇಕವಾಗಿ ಗುರುತಿಸಲ್ಪಡುವಿಕೆಯೇ ಚಿಕ್ಕ ಆಕಾಶದ ಉದಯ. ಹಾಗೆಯೇ ಪರಮಾತ್ಮನೆಂಬ ಚೈತನ್ಯಾಕಾಶದ ಒಂದು ಪರಿಮಿತ ಸ್ವರೂಪವೇ ಜೀವಾತ್ಮ. ಅಂತಃಕರಣವೇ ಇಲ್ಲಿ ಪರಿಮಿತಿಯನ್ನು ಉಂಟುಮಾಡುತ್ತವೆ. ಅಂತಃಕರಣಪರಿಮಿತವಾದ ಚೈತನ್ಯಾಕಾಶವೆಂಬ ಜೀವನು ಮಹಾಚೈತನ್ಯಾಕಾಶವಾದ ಪರಮಾತ್ಮನಿಂದಲೇ ಉದಯಿಸುತ್ತಾನೆ.
ಇಲ್ಲಿ ಇನ್ನೊಂದು ಸಂಗತಿಯನ್ನು ಶ್ರೀಮತ್ ಆನಂದಬೋಧೇಂದ್ರ ಸರಸ್ವತಿಗಳು ತಿಳಿಸುತ್ತಾರೆ. ಅಂತಃಕರಣ ಸೂಕ್ಷ್ಮ ಮಹಾಭೂತಗಳಿಂದ ಅಂದರೆ ಪಂಚತನ್ಮಾತ್ರೆಗಳಿಂದ ಆಗಿದೆ. ಪೃಥಿವ್ಯಾದಿ ಸೂಕ್ಷ್ಮ ಮಹಾಭೂತಗಳೂ ಪರಮಾರ್ಥ ಸತ್ಯವಲ್ಲ. ಪರಿಮಿತಿಯನ್ನುಂಟುಮಾಡುವ ಉಪಾಧಿಗಳು ಪರಮಾರ್ಥ ಸತ್ಯವಲ್ಲ. ಆದ್ದರಿಂದ ಸ್ವಪ್ನದಲ್ಲಿ ಕಾಣುವ ಗಂಧರ್ವನಗರದಂತೆ ಕಲ್ಪಿತವಾದ ಉಪಾಧಿಗಳಿಂದಲೇ ಜೀವಾತ್ಮನ ಉದಯ. ಈ ಅರ್ಥದಲ್ಲಿ ಆಕಾಶದಲ್ಲಿಯೇ ಆಕಾಶ ಉದಯಿಸುವಂತೆ ಎಂಬ ದೃಷ್ಟಾಂತ ಬಂದಿದೆ.)