ಯೋಗವಾಸಿಷ್ಠ; ಜೀವಗಳ ಸೃಷ್ಟಿಯ ಆರಂಭ (3-13-1ರಿಂದ 4)

Sudina 6 Yogavasista
Published on
ಯೋಗವಾಸಿಷ್ಠದ ಉತ್ಪತ್ತಿ ಪ್ರಕರಣದ 13ನೇ ಸರ್ಗ ಪ್ರಾರಂಭವಾಗುತ್ತಿದೆ. ಹಿಂದಿನ ಸರ್ಗದಲ್ಲಿ ಪಂಚಮಹಾಭೂತಾತ್ಮಕ ಜಗತ್ತಿನ ಸೃಷ್ಟಿಯನ್ನು ಹೇಳಿದೆ. ಜಗತ್ತಿನ ಸೃಷ್ಟಿಯ ವಿವರಣೆಯ ನಂತರ ಜೀವದ ಸೃಷ್ಟಿ ಮತ್ತು ಜೀವವು ಶರೀರಾದಿಗಳನ್ನು ಪಡೆದುಕೊಳ್ಳುವ ವಿಧಾನಗಳನ್ನು ಈಗ ಹೇಳಲು ಪ್ರಾರಂಭಿಸುತ್ತಿದ್ದಾರೆ.

‘ಶ್ರೀರಾಮ! ಇದೀಗ ಜೀವಗಳ ಉತ್ಪತ್ತಿಯನ್ನು ಹೇಳುತ್ತಿದ್ದೇನೆ. ಸೃಷ್ಟಿಪ್ರಕ್ರಿಯೆ ಆರಂಭವಾಗುವುದಕ್ಕಿಂತ ಮೊದಲು ಪ್ರಳಯಾವಸ್ಥೆಯಲ್ಲಿ ಎಲ್ಲ ಜೀವಗಳು ಮಾಯೆಯಿಂದ ಕೂಡಿದ ಪರಬ್ರಹ್ಮದಲ್ಲಿ ಸೇರಿಹೋಗಿದ್ದವು. ಜೀವಗಳು ಸೇರಿಹೋಗುವುದೆಂದರೆ ಅವುಗಳಲ್ಲಿರುವ ಉಪಾಧಿಗಳು ಪರಬ್ರಹ್ಮದ ಮಾಯೆಯಲ್ಲಿ ಸೇರಿಕೊಂಡಿರುವಿಕೆ. ಮನಸ್ಸು, ಪ್ರಾಣ, ಸೂಕ್ಷ್ಮ ಇಂದ್ರಿಯ ಮೊದಲಾದವು ಜೀವದಲ್ಲಿರುವ ‘ಉಪಾಧಿ’ಗಳು.

ಇವುಗಳೆಲ್ಲ ಗಾಢ ನಿದ್ರೆಯಲ್ಲಿ ಜೀವಾತ್ಮನ ಒಳಗಿರುವ ಅವಿದ್ಯೆಯಲ್ಲಿ ಸೇರಿರುತ್ತವೆ. ಆದ್ದರಿಂದಲೇ ಗಾಢನಿದ್ರೆಯನ್ನು ಒಂದು ವಿಧದ ಪ್ರಳಯವೆನ್ನುತ್ತಾರೆ. ಮಹಾಪ್ರಳಯದಲ್ಲಿ ಈ ಎಲ್ಲ ಉಪಾಧಿಗಳು ಪರಬ್ರಹ್ಮದ ಮಾಯೆಯಲ್ಲಿ ಲೀನವಾಗಿರುತ್ತವೆ. ಈಗ ಸೃಷ್ಟಿಕಾಲದಲ್ಲಿ ಆ ಉಪಾಧಿಗಳು ಹೊರಬರುವ ಮೂಲಕ ಅವುಗಳಿಂದ ಕೂಡಿದ ಚೈತನ್ಯವು ಆವಿರ್ಭವಿಸುತ್ತದೆ. ಹೀಗೆ ಆವಿರ್ಭವಿಸುವಿಕೆಯೇ ಜೀವಗಳ ಆವಿರ್ಭಾವ.’

‘ಶ್ರೀರಾಮ! ಎಲ್ಲದಕ್ಕೂ ಅಧಿಷ್ಠಾನವಾಗಿರುವ ಆ ಪರಬ್ರಹ್ಮದಿಂದಲೇ ಜೀವಗಳ ಆವಿರ್ಭಾವವಾಗುತ್ತದೆ. ಪ್ರಳಯಕಾಲದಲ್ಲಿ ಪರಬ್ರಹ್ಮವು ಸಮಸ್ಥಿತಿಯಲ್ಲಿರುತ್ತದೆ. ಏಕೆಂದರೆ ಆಗ ಕಾರ್ಯಪ್ರಪಂಚವಿರುವುದಿಲ್ಲ. ಕಾರ್ಯಪ್ರಪಂಚವಿದ್ದರೆ ಅದರಲ್ಲಿ ಒಂದು ರೀತಿಯ ವೈಷಮ್ಯ ಉಂಟಾಗುತ್ತಿತ್ತು. ಪ್ರಳಯಕಾಲದಲ್ಲಿ

ಆ ಪರಬ್ರಹ್ಮದ ಜೊತೆ ತಾದಾತ್ಮ್ಯಂಬಧವನ್ನು ಇಟ್ಟುಕೊಂಡಿರುವ ಮಾಯೆ ಇರುತ್ತದೆ. ಆದರೂ ಪರಬ್ರಹ್ಮವು ಸಮಸ್ಥಿತಿಯಲ್ಲೇ ಇರುತ್ತದೆ. ಏಕೆಂದರೆ ಕಾರ್ಯಪ್ರಪಂಚವಿಲ್ಲದ ಮಾಯೆ ಅದು. ಅಂಥ ಪರಬ್ರಹ್ಮದಲ್ಲಿ ಆಕಾಶ, ತೇಜಸ್ಸು ಮುಂತಾದವು ಇನ್ನೂ ಉತ್ಪತ್ತಿಯಾಗುವುದಕ್ಕಿಂತ ಮೊದಲೇ ಜೀವದ ಆವಿರ್ಭಾವ ಆಗುತ್ತದೆ. ‘ಚೇತಯಿತೃತ್ವ’ವೇ ಜೀವದ ಲಕ್ಷಣ.

ಅತ್ಯಂತ ಸಮೀಪದಲ್ಲಿರುವ ಜಡ ವಸ್ತುಗಳನ್ನು ತನ್ನ ಚೈತನ್ಯದ ಛಾಯೆಯ ಮೂಲಕ ಚೇತನಗಳಂತೆ ಗೋಚರಿಸುವ ಹಾಗೆ ಮಾಡುವ ಸಾಮರ್ಥ್ಯವೇ ‘ಚೇತಯಿತೃತ್ವ’. ಜೀವಾತ್ಮನಿಗೆ ಅತ್ಯಂತ ಸಮೀಪದಲ್ಲಿ ಅಂತಃಕರಣವಿರುತ್ತದೆ. ಆ ಅಂತಃಕರಣವು ವಸ್ತುತಃ ಜಡ. ಜೀವಾತ್ಮನ ಚೈತನ್ಯದ ಛಾಯೆ ಅಂತಃಕರಣದಲ್ಲಿ ಇದ್ದುದರಿಂದ ಅಂತಃಕರಣವು ಚೇತನದಂತೆ ಗೋಚರಿಸುತ್ತದೆ. ಹೀಗೆ ಮಾಡುವ ಸಾಮರ್ಥ್ಯವೇ ‘ಚೇತಯಿತೃತ್ವ’. ಈ ಚೇತಯಿತೃತ್ವ ಬರಲು ಅಂತಃಕರಣದ ಭಾಗಗಳಾದ ಚಿತ್ತ, ಅಹಂಕಾರ ಮತ್ತು ಬುದ್ಧಿ-ಮನಸ್ಸುಗಳ ಸೃಷ್ಟಿಯಾಗಬೇಕಾಗುತ್ತದೆ.’

‘ಮಾಯೆಯಿಂದ ಕೂಡಿದ ಆ ಪರಬ್ರಹ್ಮದಲ್ಲಿ ಅದರ ಸ್ವಭಾವದಿಂದಲೇ ಅದರ ಜ್ಞಾನಕ್ಕೆ ವಿಷಯವಾಗುವ ವಸ್ತುವೊಂದು ತೋರಿಕೊಳ್ಳುತ್ತದೆ. (ಹೀಗೆ ಜ್ಞಾನಕ್ಕೆ ವಿಷಯವಾಗುವ ವಸ್ತುವನ್ನೇ ಯೋಗವಾಸಿಷ್ಠವು ‘ಚೈತ್ಯ’ ಎಂದು ಕರೆಯುತ್ತದೆ.) ಆ ಪರಬ್ರಹ್ಮದಲ್ಲಿಯೇ ‘ಚೈತ್ಯ’ವಾಗಿರುವ ಅಂಶ ಕೂಡಿಕೊಂಡಿದೆ. (ಬಹುಶಃ ಹಿಂದೆ ಹೇಳಿದ ಮಾಯೆಯೇ ಪರಬ್ರಹ್ಮದಲ್ಲಿರುವ ‘ಚೈತ್ಯಾಂಶ’.)

ಆ ಚೈತ್ಯಾಂಶದ ಚೇತನದಿಂದಲೇ ಆ ವಿಷಯವಸ್ತು ತೋರಿಕೊಂಡಿದೆ. ಅಂದರೆ ಪರಬ್ರಹ್ಮದಲ್ಲಿರುವ ಚೈತ್ಯಾಂಶದಿಂದಲೇ ಇನ್ನೊಂದು ಚೈತ್ಯವಾಗಿರುವ ವಿಷಯವು ತೋರಿಕೊಂಡಿದೆ. ಹೀಗೆ ತೋರಿಕೊಂಡ ಚೈತ್ಯವು ಮತ್ತೆ ಯಾವುದೂ ಅಲ್ಲ; ಚಿತ್ತ. ಅಂದರೆ ಅಂತಃಕರಣದ ಒಂದು ಭಾಗ. ನೆನಪಿನ ಶಕ್ತಿಯೇ ಚಿತ್ತ.’

‘ಹೀಗೆ ಚಿತ್ತದ ಸೃಷ್ಟಿಯಾದ ನಂತರ ಜೀವಚೇತನದಲ್ಲಿ ಜೀವತ್ವವು ತೋರಿಕೊಳ್ಳುತ್ತದೆ. ಚಿತ್ತವೇ ಈಗ ಜೀವಚೈತನ್ಯಕ್ಕೆ ಚೇತ್ಯ. ಚಿತ್ತದಲ್ಲಿ ಈಗ ಚೈತನ್ಯದ ಛಾಯೆ ಉಂಟಾಗಿದೆ. ಅಂತಹ ಚಿತ್ತದೊಡನೆ ಸೇರಿಕೊಂಡಿದ್ದರಿಂದ ಅವನಲ್ಲಿ ಜೀವತ್ವ ಉಂಟಾಗಿದೆ. ಇದಾದ ನಂತರ ಅಹಂಕಾರದ ಸೃಷ್ಟಿ. ಅಹಂಕಾರ ಎಂದರೆ ಇಲ್ಲಿ ‘ನಾನು’ ಎಂಬ ಭಾವ.

ಚಿತ್ತದೊಡನೆ ಸೇರಿಕೊಂಡಿದ್ದರಿಂದ ಮತ್ತು ಜೀವತ್ವ ಉಂಟಾದ್ದರಿಂದ ಆ ಜೀವವು ತನ್ನನ್ನೂ ತಾನು ಗುರುತಿಸಿಕೊಳ್ಳಲು ಪ್ರಾರಂಭಿಸುತ್ತದೆ. ತನ್ನನ್ನು ತಾನು ಗುರುತಿಸಿಕೊಳ್ಳುವಿಕೆಯೇ ಅಹಂಕಾರ. ಈ ಚಿತ್ತದ ಪರಿಮಿತಿಯೇ ತನ್ನ ಪರಿಮಿತಿ, ಈ ಚಿತ್ತದಷ್ಟೇ ನಾನು ದೊಡ್ಡವನು, ಹೀಗೆ ತನ್ನನ್ನು ತಾನು ಆ ಜೀವ ಗುರುತಿಸಿಕೊಳ್ಳುತ್ತದೆ. ಆಗ ‘ನಾನು’ (ಅಹಂಕಾರ) ಎಂಬ ಭಾವವು ಉದಯಿಸುತ್ತದೆ. ಇದೇ ಅಹಂಕಾರದ ಸೃಷ್ಟಿ.’

‘ಇದಾದ ನಂತರ ಬುದ್ಧಿಯ ಸೃಷ್ಟಿ. ಹಿಂದೆ ಹೇಳಿದ ಅಹಂಕಾರವೇ ವಿಕಾಸ ಹೊಂದಿ ಬುದ್ಧಿಯಾಗುತ್ತದೆ. ಅಂದರೆ ಜೀವನು ವಿಚಾರಮಾಡಲು ಪ್ರಾರಂಭಿಸುತ್ತಾನೆ. ವಿಚಾರಮಾಡುವ ಅಂತಃಕರಣದ ವಿಭಾಗವೇ ಬುದ್ಧಿ. ಆಗ ಅಂತಃಕರಣದಲ್ಲಿ ಸುಪ್ತವಾಗಿದ್ದ ಹಿಂದಿನ ವಾಸನೆಗಳು ಹೊರಬರುತ್ತವೆ. ವಾಸನೆಗಳು ಹೊರಬಂದಾಗ ಸ್ವಪ್ನದಂಥ ಆಲೋಚನಾತರಂಗಗಳು ಅಂತಃಕರಣದಲ್ಲಿ ಬರುತ್ತವೆ. ಶಬ್ದಾದಿ ವಿಷಯಗಳು ವಾಸನೆಗಳ ರೂಪದಲ್ಲಿ ಅಂತಃಕರಣದ ಒಳಗೆ ಸುಪ್ತವಾಗಿದ್ದವು. ಅವು ಈಗ ಸಂಕಲ್ಪ-ವಿಕಲ್ಪಗಳ ರೂಪದಲ್ಲಿ ಹೊರಬರುತ್ತಿವೆ. ಹೀಗೆ ಸಂಕಲ್ಪ-ವಿಕಲ್ಪಗಳೆಂಬ ಅಂತಃಕರಣದ ವಿಭಾಗವು ಪ್ರಾರಂಭವಾಗುತ್ತದೆ. ಈ ವಿಭಾಗವೇ ಮನಸ್ಸು.’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net