

ನಾಡಹಬ್ಬ ಮೈಸೂರು ದಸರೆ ಅಂಗವಾಗಿ ಯೋಗ ದಸರಾ ಉಪಸಮಿತಿಯಿಂದ ವಸ್ತುಪ್ರದರ್ಶನ ಪ್ರಾಧಿಕಾರ ಆವರಣಲ್ಲಿರುವ ಪಿ.ಕಾಳಿಂಗರಾವ್ ಸಂಭಾಗಣದಲ್ಲಿ ಶನಿವಾರ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧಾ ಕಾರ್ಯಕ್ರಮಕ್ಕೆ ಶಾಸಕ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿ ಮಾತನಾಡಿ, ಜಗತ್ತಿಗೆ ಭಾರತ ನೀಡಿದ ಅತ್ಯದ್ಭುತ ಕೊಡುಗೆಗಳಲ್ಲಿ ಯೋಗವೂ ಒಂದಾಗಿದೆ. ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಅಳವಡಿಸಿಕೊಂಡರೆ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಅಲ್ಲದೆ ಸಮಾಜದದಲ್ಲಿ ಸ್ವಾಸ್ಥೃ, ಸಾಮರಸ್ಯ ವಾತಾವರಣ ನಿರ್ಮಾಣವಾಗುತ್ತದೆ ಎಂದರು.
ಯೋಗಕ್ಕೆ ಮೈಸೂರು ಅರಸರ ಕೊಡುಗೆ ಅಪಾರ. ಮುಮ್ಮಡಿ ಕೃಷ್ಣರಾಜ ಒಡೆಯರ್ ಇದಕ್ಕೆ ಮುನ್ನುಡಿ ಬರೆದರು. ಅವರ ಕಾಲದಲ್ಲೇ ಅರಮನೆಯಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿತ್ತು. ಬಳಿಕ ಆಳ್ವಿಕೆಗೆ ಬಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿದರು. ಯೋಗದ ಮೇಲೆ ಅಪಾರ ಪ್ರೀತಿಯೊಂದಿದ್ದ ಅವರು ತಿರುಮಲೈ ಕೃಷ್ಣಮಾಚಾರ್ ಅವರನ್ನು ಮೈಸೂರಿಗೆ ಕರೆಸಿಕೊಂಡು ಸಾರ್ವಜನಿಕರಿಗೆ ಯೋಗವನ್ನು ಮುಕ್ತವಾಗಿ ಕಲಿಯಲು ಅವಕಾಶ ಕಲ್ಪಿಸಿಕೊಟ್ಟರು. ಇಂದು ಜಗತ್ತಿನಲ್ಲಿ ಯೋಗ ಎಲ್ಲೆಡೆ ಪಸರಿಸಿದ್ದರೂ ಅದರ ಮೂಲ ಬೇರು ಮೈಸೂರೇ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.