ದೈಹಿಕ-ಮಾನಸಿಕ ಆರೋಗ್ಯ ರಕ್ಷಣೆಗೆ ರಾಮಬಾಣ: ಇಂದು ವಿಶ್ವ ಯೋಗ ದಿನ

Yoga Modi
Published on
| ಶ್ರೀ ಎಂ.

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾವನೆಯಂತೆ ವಿಶ್ವಸಂಸ್ಥೆಯ ಮಹಾಧಿವೇಶನ ಜೂನ್ 21ನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು 2015ರಲ್ಲೇ ಘೋಷಿಸಿದೆ. ಈ ಸಂದರ್ಭದಲ್ಲಿ ಯೋಗದ ಮಹತ್ವ ತಿಳಿದುಕೊಳ್ಳುವುದು ಅಗತ್ಯ.

ಭಾರತ-ಇಂಡಿಯಾ ಎಂದು ಕರೆಯಲಾಗುವ ನಮ್ಮ ಪ್ರಾಚೀನ ದೇಶ ಜಗತ್ತಿಗೇ ನೀಡಿದ ಅಮೂಲ್ಯ ನಿಧಿಗಳಲ್ಲಿ ಯೋಗ ಕೂಡ ಒಂದು. ಉಪನಿಷದ್ ಕಾಲದಿಂದಲೂ, ಅಂದರೆ ಕನಿಷ್ಠ ಒಂದು ಸಾವಿರ ವರ್ಷಗಳ ಹಿಂದೆ ಸಂತರು ಯೋಗವನ್ನು ಕಲಿಸುತ್ತಿದ್ದರು ಹಾಗೂ ಪಾಲಿಸುತ್ತಿದ್ದರು. ಸಂಸ್ಕೃತದ ‘ಯುಜ್’ ಪದದಿಂದ ವ್ಯುತ್ಪತ್ತಿಯಾದ ಯೋಗವು ಮಾನವ ಹಾಗೂ ದೈವಿಕ ಶಕ್ತಿಗಳನ್ನು ಒಗ್ಗೂಡಿಸುವ ವಿಜ್ಞಾನ. ಅದು ದೇಹ ಮತ್ತು ಮನಸ್ಸಿಗೆ ತರಬೇತಿ ನೀಡಿ ಅವುಗಳನ್ನು ಆರೋಗ್ಯಕರ ಹಾಗೂ ಪ್ರಶಾಂತವಾಗಿಡಲು ನೆರವಾಗುತ್ತದೆ. ಅಂತಿಮವಾಗಿ, ಮನಸ್ಸು ಮಾಡಿದವರನ್ನು ‘ಸಮಾಧಿ’ ಸ್ಥಿತಿಗೆ ಒಯ್ಯಲು ಸಹಾಯಕವಾಗುತ್ತದೆ. ಅಧ್ಯಾತ್ಮ ಮತ್ತು ಅಧ್ಯಾತ್ಮಶಾಸ್ತ್ರದಲ್ಲಿ ಆಸಕ್ತಿ ಇಲ್ಲದವರಿಗೂ ಯೋಗ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸುವಲ್ಲಿ ನೆರವಾಗುತ್ತದೆ.

ವಿಶ್ವಸಂಸ್ಥೆ ವ್ಯಾಖ್ಯಾನ: ಮಾನಸಿಕ ಆರೋಗ್ಯ ಮಾನವನ ಒಟ್ಟಾರೆ ಆರೋಗ್ಯದ ಅವಿಭಾಜ್ಯ ಅಂಗ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಕೆಲವು ವರ್ಷಗಳ ಹಿಂದೆ ವ್ಯಾಖ್ಯಾನಿಸಿದೆ. ಸಾವಿರಾರು ವರ್ಷಗಳ ಕಾಲ ಯೋಗಿಗಳು ಕೂಡ ಇದೇ ಚಿಂತನೆಯನ್ನು ಹೊಂದಿದ್ದರು. ವೈಯಕ್ತಿಕವಾಗಿ ಹೇಳುವುದಾದರೆ, ನಾನು 10 ವರ್ಷದವನಿದ್ದಾಗ ಯೋಗ ‘ಆಸನಗಳು’ ಹಾಗೂ ‘ಪ್ರಾಣಾಯಾಮ’ ಆರಂಭಿಸಿದ್ದೆ. ಹೀಗಾಗಿ ನನ್ನ ಏಳು ದಶಕಗಳ ಜೀವನ ಪಯಣದಲ್ಲಿ ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯಪೂರ್ಣವಾಗಿದ್ದೇನೆ. ಕೋವಿಡ್-19 ಸಾಂಕ್ರಾಮಿಕತೆಯ ಎರಡನೆಯ ಅಲೆಯ ಭೀಕರತೆ ಇಳಿಮುಖವಾಗುತ್ತಿದ್ದರೂ ನಾವಿನ್ನೂ ಸಂಪೂರ್ಣವಾಗಿ ಅದರಿಂದ ಹೊರಬಂದಿಲ್ಲ. ಸಾಂಕ್ರಾಮಿಕತೆ ಆರಂಭವಾದಾಗಿನಿಂದಲೂ ನಾನು ಇಂಟರ್​ನೆಟ್ ಚಾನೆಲ್​ಗಳ ಮೂಲಕ ನೂರಾರು ಜನರಿಗೆ ಯೋಗ ವಿಜ್ಞಾನ, ಅದರಲ್ಲೂ ವಿಶೇಷವಾಗಿ ಪ್ರಾಣಾಯಾಮ ಅಥವಾ ಉಸಿರಾಟದ ಸರಿಯಾದ ವಿಧಾನ ಕಲಿಸುತ್ತಿದ್ದೇನೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕು ತಡೆಯುವ ಯೋಗ ವಿಧಾನಗಳನ್ನೂ ಬೋಧಿಸುತ್ತಿದ್ದೇನೆ. ಕರೊನಾ ಸೋಂಕಿಗೆ ಒಳಗಾದವರು ಯೋಗ ಮಾಡುವ ಮೂಲಕ ಆರೋಗ್ಯ ಸ್ಥಿತಿಯನ್ನು ಸುಧಾರಿಸಿ ಕೊಂಡಿದ್ದಾರೆಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಆಸನ ಮತ್ತು ಪ್ರಾಣಾಯಾಮ ದೇಹಕ್ಕೆ ಒಳ್ಳೆಯದು. ಸರಳ ಧ್ಯಾನವು ಭಯ ಹಾಗೂ ಖಿನ್ನತೆ ನಿಭಾಯಿಸಲು ನೆರವಾಗುತ್ತದೆ.

ಇಂದು ಯೋಗ ಅಂತಾರಾಷ್ಟ್ರೀಯವಾಗಿ ಚಾಲ್ತಿಯಲ್ಲಿರುವ ಪದವಾಗಿದೆ. ತಿಂಬುಕ್ತುನಿಂದ ಹಾಲಿವುಡ್​ವರೆಗೆ ಅತ್ಯುತ್ಸಾಹದಿಂದ ಯೋಗ ದಿನವನ್ನು ಆಚರಿಸಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯೋಗ ಕುರಿತು ಭಾರತ ಮತ್ತು ಜಗತ್ತಿನಾದ್ಯಂತ ಆಸಕ್ತಿ ಅಗಾಧ ವಾಗಿ ಬೆಳೆದಿದೆ. ಜೀವನಶೈಲಿ ಯಲ್ಲಿ ಸ್ವತಃ ಯೋಗ ಅಳವಡಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅದರ ಜಾಗೃತಿಗಾಗಿ ಮಾಡಿದ ಪ್ರಯತ್ನಗಳಿಂದಾಗಿ ಪ್ರಾಚೀನ ಯೋಗ ವಿಜ್ಞಾನ ಈಗ ಜನಸಮೂಹದಲ್ಲಿ ಜನಪ್ರಿಯವಾಗಿದೆ.

ಯೋಗ ಒಂದು ಜಾಗತಿಕ ಟ್ರೆಂಡ್ ಆಗಿದೆ. ಯೋಗ ಆಚರಣೆಯ ಧನಾತ್ಮಕ ಫಲಿತಾಂಶಗಳಿಂದ ಅದರ ಜನಪ್ರಿಯತೆ ಇನ್ನೂ ಹೆಚ್ಚಲಿದೆ ಎನ್ನುವುದು ನನ್ನ ನಂಬಿಕೆ. ಆರೋಗ್ಯ ಕಾಪಾಡುವಲ್ಲಿ ದೊಡ್ಡ ಪಾತ್ರ ವಹಿಸುತ್ತಿರುವ ಯೋಗವನ್ನು ಉತ್ತೇಜಿಸಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಆರೋಗ್ಯ ಪ್ರತಿ ನಾಗರಿಕರ ಮೂಲಭೂತ ಹಕ್ಕಾಗಿದೆ. ಉತ್ತಮ ಆರೋಗ್ಯ ಗಳಿಸಿಕೊಳ್ಳುವ ಹಾಗೂ ಸಂತೋಷದಿಂದ ಇರುವ ಸಂಕಲ್ಪ ಅಂತಾರಾಷ್ಟ್ರೀಯ ಯೋಗ ದಿನದಂದು ಒಡಮೂಡಲಿ.

(ಲೇಖಕರು ಆಧ್ಯಾತ್ಮಿಕ-ಯೋಗ ಗುರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net