

ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ, ನೈತಿಕ ಆರೋಗ್ಯ ಉತ್ತಮವಾಗಿಸಲು ಯೋಗ ಸಹಕರಿಸುತ್ತದೆ ಎಂದು ಚೈತನ್ಯ ಯೋಗ ಶಿಕ್ಷಣ ಹಾಗೂ ಸಂಶೋಧನಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಪಿ.ಮೂರ್ತಿ ತಿಳಿಸಿದರು.
ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ಶಾರದಾ ವಿಲಾಸ ಔಷಧ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ನೆನಪಿನ ಶಕ್ತಿಗಾಗಿ ಯೋಗ’ ಕುರಿತ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಎಂದರೆ ಆಸನಕ್ಕಷ್ಟೇ ಸೀಮಿತವಲ್ಲ. ಅದು ಪರಿಪೂರ್ಣವಾದ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಜೀವನದ ಅವಿಭಾಜ್ಯ ಪ್ರಕಿಯೆಯಾಗಿದೆ. ಅದು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮಲ್ಲಿ ವಿಶೇಷ ಬದಲಾವಣೆ ಸಾಧ್ಯ ಎಂದು ಹೇಳಿದರು.
ಜೀವನದಲ್ಲಿ ಉತ್ತಮ ಆಹಾರ ಪದ್ಧತಿ, ಸರಿಯಾದ ಉಸಿರಾಟದ ಪದ್ಧತಿ, ಅಗತ್ಯ ವಿಶ್ರಾಂತಿ, ಧನಾತ್ಮಕ ಚಿಂತನೆ ಮುಖ್ಯ. ಇವುಗಳ ಬಗ್ಗೆಯೇ ಯೋಗ ತಿಳಿಸುತ್ತದೆ. ಜೀವನ ಶೈಲಿಗೆ ಪೂರಕವಾದ ಅಂಶವನ್ನು ಯೋಗ ಬೋಧಿಸುತ್ತದೆ. ಈ ಕಾರಣದಿಂದಾಗಿಯೇ ಅದು ನಮ್ಮನ್ನಷ್ಟೇ ಅಲ್ಲದೆ ವಿದೇಶಿಗರನ್ನು ಆಕರ್ಷಿಸುತ್ತಿದೆ ಎಂದರು.
ಮರೆವಿನ ಕಾಯಿಲೆಯೂ ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆ ಇಲ್ಲದಾಗ ಹಾಗೂ ಸರಿಯಾದ ಪ್ರಮಾಣದ ಆಕ್ಸಿಜನ್ ದೊರೆಯದಿದ್ದಾಗ ಉಂಟಾಗುತ್ತದೆ. ಅದಕ್ಕೆ ಪೂರಕವಾಗಿ ನಾಡಿ ಶೋಧನಾ ಹಾಗೂ ಭ್ರಾಮರಿ ಮುಂತಾದ ಪ್ರಾಣಾಯಾಮ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಮುಂದಕ್ಕೆ ಭಾಗಿ ಮಾಡುವ ಆಸನಗಳೂ ರಕ್ತ ಪರಿಚಲನೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಶಾರದಾ ವಿಲಾಸ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಷಿ, ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯೆಟ್ರಿಕ್ ಎಂಪವರ್‌ಮೆಂಟ್ ಕಾರ್ಯದರ್ಶಿ ಡಾ.ಪ್ರತಿಭಾ ಪೆರೈರಾ, ಎಆರ್‌ಡಿಎಸ್‌ಐ ಉಪಾಧ್ಯಕ್ಷ ಜಿ.ಎಸ್.ಗಣೇಶ್, ಕಾರ್ಯದರ್ಶಿ ಕೆ.ಆರ್.ಗಣೇಶ್ ರಾವ್ ಮತ್ತಿತರರು ವೇದಿಕೆಯಲ್ಲಿ ಇದ್ದರು.