

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸರೋಜಿನಿ ಮಧುಸೂದನ ಕುಶೆ ವಿದ್ಯಾಸಂಸ್ಥೆಯಲ್ಲಿ ಕ್ರೀಡಾಭಾರತಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಯೋಗದಿನಾಚರಣೆಯನ್ನು ಆಚರಿಸಿಲಾಯಿತು.
ದ.ಕ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಸಿ. ಎ ಶಾಂತಾರಾಮ ಶೆಟ್ಟಿ ಮಾತನಾಡಿ, ಸಾವಿರಾರು ವರ್ಷ ಹಳೆಯದಾದ ಯೋಗವು ನಮ್ಮ ಪೂರ್ವಜರ ಕೊಡುಗೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸವಿರುವ ಭಾರತೀಯ ಯೋಗ ಪರಂಪರೆಯು ನಮ್ಮ ಪೂರ್ವಜರು ಜಗತ್ತಿಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಒಂದು ವ್ಯಸನವಾಗಿ ಮಾರ್ಪಡುತ್ತಿದೆ. ಇದು ಯುವ ಪೀಳಿಗೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ತೀವ್ರವಾಗಿ ಹದಗೆಡಿಸುತ್ತಿದೆ. ಏಕಾಗ್ರತೆಯ ಕೊರತೆ, ಖಿನ್ನತೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ತುತ್ತಾಗುತ್ತಿದ್ದು, ಯೋಗ ಇದಕ್ಕೆ ಯೋಗ್ಯ ಪರಿಹಾರ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಸಾಯಿನಾಥ ಮಲ್ಲಿಗೆಮಾಡು, ನಮ್ಮ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ವಾರಕ್ಕೆ ಒಂದು ದಿನ ಯೋಗ ತರಬೇತಿ ತರಗತಿಯನ್ನು ಕಡ್ಡಾಯಗೊಳಿಸಿದೆ. ಯೋಗದ ನಿರಂತರ ಅಭ್ಯಾಸದಿಂದ ಕೇವಲ ದೈಹಿಕ ಸದೃಢತೆ ಮಾತ್ರವಲ್ಲದೆ, ಮಾನಸಿಕ ಒತ್ತಡ ನಿವಾರಣೆಯಾಗಿ ಮನಸ್ಸು ಪ್ರಶಾಂತಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಸ್ಮರಣಶಕ್ತಿ ಮತ್ತು ಆಂತರಿಕ ಶಿಸ್ತು ವೃದ್ಧಿಯಾಗುತ್ತದೆ. ಆರೋಗ್ಯವಂತ ದೇಹ ಮತ್ತು ಸೌಮ್ಯ ಮನಸ್ಸಿನಿಂದಾಗಿ ಅನಗತ್ಯ ವೈದ್ಯಕೀಯ ವೆಚ್ಚಗಳು ತಪ್ಪುತ್ತವೆ, ಇದು ಪರೋಕ್ಷವಾಗಿ ಕುಟುಂಬದ ಆರ್ಥಿಕ ಬಲವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ನಿತ್ಯ ಯೋಗ ಮಾಡೋಣ, ಆರೋಗ್ಯಕರ ಸಮಾಜ ಕಟ್ಟೋಣ ಎಂದರು.
ವಿದ್ಯಾಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಸರೋಜಿನಿ ಮಧುಸೂದನ ಕುಶೆ ಅವರು ವಿಶ್ವ ಯೋಗದಿನಾಚರಣೆ ಬಗ್ಗೆ ಶುಭ ಹಾರೈಸಿದರು.
ಪ್ರಮುಖರಾದ ಅನಂತಪದ್ಮನಾಭ ಪ್ರಭು, ಗಂಗಾಧರ ಅತ್ತಾವರ ಅವರು ಯೋಗ ತರಬೇತಿಯ ಸಂದರ್ಭ ಉಪಸ್ಥಿತರಿದ್ದರು. ಕುಶೆ ವಿದ್ಯಾಸಂಸ್ಥೆಯ ಎ.ಒ ಮುರಳಿಧರ್ ರಾವ್, ಉಪ ಪ್ರಾಂಶುಪಾಲೆ ಪವಿತ್ರ, ಸಹ ಮುಖ್ಯ ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಶ್ರಾವಣಿ ನಿರೂಪಿಸಿದರು, ಭಾಗ್ಯಶ್ರೀ ಸ್ವಾಗತಿಸಿದಳು, ಅದಿತಿ ಅತಿಥಿಗಳನ್ನು ಪರಿಚಯಿಸಿದಳು. ಸಮೀರ್ ವಂದಿಸಿದನು.