

ಶಿವಮೊಗ್ಗ: ಯೋಗ ಮತ್ತು ಸಂಗೀತದಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಇವೆರಡಕ್ಕೂ ಎಲ್ಲ ಕಷ್ಟಗಳನ್ನೂ ದೂರ ಮಾಡುವ ಶಕ್ತಿ ಇದೆ ಎಂದು ಜಡೆ ವಿರಕ್ತ ಮಠದ ಶ್ರೀ ಮಹಾಂತ ಸ್ವಾಮೀಜಿ ಬಣ್ಣಿಸಿದರು.
ಕುವೆಂಪುನಗರದ ಎನ್‌ಇಎಸ್ ಲೇಔಟ್‌ನಲ್ಲಿ ವೀರಶೈವ ಲಿಂಗಾಯತ ಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಮಹಿಳಾ ಘಟಕ, ಯುವ ಘಟಕ, ಮಹಾನಗರ ಪಾಲಿಕೆ ಘಟಕ ಹಾಗೂ ಶ್ರೀ ಶಿವಗಂಗಾ ಯೋಗಕೇಂದ್ರ ಆಶ್ರಯದಲ್ಲಿ ಉಚಿತ ಯೋಗ ಶಿಬಿರ ಉದ್ಘಾಟಿಸಿ ಆಶೀವರ್ಚನ ನೀಡಿದ ಅವರು, ಭಾರತ ಇಂದು ವಿಶ್ವಗುರು ಆಗಿ ಬೆಳೆಯಲಿಕ್ಕೆ ಯೋಗವೂ ಒಂದು ಕಾರಣವಾಗಿದೆ ಎಂದರು. ಕುವೆಂಪು ನಗರದ ವೀರಶೈವ ಲಿಂಗಾಯತ ಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ವಿವಿಧ ಘಟಕಗಳು, ಮಹಾನಗರ ಪಾಲಿಕೆ ಹಾಗೂ ಶ್ರೀ ಶಿವಗಂಗಾ ಯೋಗಕೇಂದ್ರ ಆಶ್ರಯದಲ್ಲಿ ಉಚಿತ ಯೋಗ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಭಾರತ ಇಂದು ವಿಶ್ವಗುರು ಆಗಿ ಬೆಳೆಯಲು ಯೋಗವೂ ಕಾರಣ ಎಂದರು. ಸಾವಿರಾರು ವರ್ಷಗಳ ಇತಿಹಾಸವಿರುವ ಯೋಗ, ಪ್ರಾಣಾಯಾಮ, ಧ್ಯಾನ ಇಂದು ಹೆಚ್ಚು ಪ್ರಚಲಿತವಾಗಿವೆ. ಯೋಗದಿಂದ ದೀರ್ಘಾಯುಷ್ಯ, ಸಕಾರಾತ್ಮಕ ಭಾವನೆಗಳ ಜತೆಗೆ ದೇಹ ಮನಸ್ಸು ಸದೃಢವಾಗಿರುತ್ತದೆ. ಯೋಗ ಹಾಗೂ ಸಂಗೀತ ಒಂದೇ ನಾಣ್ಯದ ಎರಡು ಮುಖಗಳು. ಇವು ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನಮ್ಮ ಮನಸ್ಸು ಸದಾ ಸದ್ಭಾವನೆಯಿಂದ ಕೂಡಿರಲು ಅತ್ಯವಶ್ಯ. ಇಂದಿನ ಒತ್ತಡದ ಜೀವನದಲ್ಲಿ ಔಷಧ, ಮಾತ್ರೆಗಳಿಗಿಂತ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಸಂಗೀತ ತುಂಬ ಸಹಕಾರಿ ಎಂದು ಹೇಳಿದರು. ಸಂಗೀತ ಶಿಬಿರ ಉದ್ಘಾಟಿಸಿದ ವಿದ್ವಾನ್ ಹುಮಾಯೂನ್ ಹರ್ಲಾಪುರ್, ಸಂಗೀತ ಎಂಬುದು ಮನುಷ್ಯ ಜೀವನದ ಒಂದು ಭಾಗ. ಸಂಗೀತಕ್ಕಿರುವ ಶಕ್ತಿ ಮತ್ಯಾವುದಕ್ಕೂ ಇಲ್ಲ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಮಾತನಾಡಿದರು. ಯೋಗ ತರಬೇತುದಾರ ಸಿ.ವಿ.ರುದ್ರಾರಾಧ್ಯ, ಶಿವಗಂಗಾ ಯೋಗಕೇಂದ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯಕುಮಾರ್, ನೀಲಕಂಠ, ಕಾಟನ್ ಜಗದೀಶ್, ಎಲ್.ಎಂ.ಮೋಹನ್, ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಾಗ್ದೇವಿ ಬಸವರಾಜ್, ವೀರಶೈವ ಮಹಾಸಭಾ ಜಿಲ್ಲಾ ಮಾಧ್ಯಮ ಘಟಕದ ಅಧ್ಯಕ್ಷ ಕೆ.ಆರ್.ಸೋಮನಾಥ್, ಪಾಲಿಕೆ ಘಟಕದ ಅಧ್ಯಕ್ಷ ರಾಜಶೇಖರ್, ಯೋಗ ಶಿಕ್ಷಕ ಲವಕುಮಾರ್, ಮೋಹನ್ ಬಾಳೆಕಾಯಿ ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತ ಮಹಾಸಭಾ ಸಮಾಜದಲ್ಲಿ ಸಂಘಟನೆಗಳ ಮುಖಾಂತರ ಲಿಂಗಾಯತ ಧರ್ಮವನ್ನು ಪ್ರಚಾರಗೊಳಿಸುತ್ತಿದೆ. ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಹಾಗೂ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಕೆಳದಿ ಶಿವಪ್ಪನಾಯಕ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತ ಬಂದಿದ್ದೇವೆ. - ರುದ್ರಮುನಿ ಸಜ್ಜನ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ