ಖಿನ್ನತೆಯಿಂದ ಹೊರಬರಲು ಯೋಗ, ಮುದ್ರೆಗಳ ನೆರವು ಸಹಕಾರಿ

yoga
Published on

ಪ್ರ: ಖಿನ್ನತೆ ನಿಯಂತ್ರಣಕ್ಕೆ ಯೋಗ ಮತ್ತು ಮುದ್ರೆಗಳು ಸಹಕಾರಿಯೇ? ಹೌದಾದರೆ ಯಾವ ಯೋಗ, ಮುದ್ರೆಗಳನ್ನು ಅಭ್ಯಾಸ ಮಾಡಬೇಕು?

Yogakshema vvani
 ಆಧುನಿಕ ಜೀವನಶೈಲಿಯು ಒತ್ತಡ, ಆತಂಕ ಮತ್ತು ಖಿನ್ನತೆಗೆ ಅನೇಕರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ಯಾವುದೋ ಒಂದು ವಿಷಯದ ಬಗ್ಗೆ ನಿರಂತರ ಭಯವು ಮನಸ್ಸಿನಲ್ಲಿ ಮುಂದುವರಿದಾಗ, ಅದು ಆತಂಕದ ರೂಪವನ್ನು ತೆಗೆದುಕೊಳ್ಳುತ್ತದೆ ಮತ್ತು ಆಗಾಗ ಖಿನ್ನತೆಗೆ ಕಾರಣವಾಗಬಹುದು. ಖಿನ್ನತೆಯ ಅನುಭವವು ಮನಸ್ಥಿತಿಯಲ್ಲಿನ ಸಾಮಾನ್ಯ ಏರಿಳಿತಗಳನ್ನು ಮೀರುತ್ತದೆ ಮತ್ತು ವ್ಯಕ್ತಿಯ ವೈಯಕ್ತಿಕ, ಸಾಮಾಜಿಕ ಮತ್ತು ವೃತ್ತಿಪರ ಜೀವನದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಖಿನ್ನತೆಯ ಅನುಭವವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಖಿನ್ನತೆಯು ಯಾವ ಕಾರಣವಿಲ್ಲದೆಯೂ ಇರಬಹುದು. ಅಂತೆಯೇ ಅನಾರೋಗ್ಯವು ತಿಂಗಳುಗಳವರೆಗೆ ಇರುತ್ತದೆ ಅಥವಾ ದಶಕಗಳ ಅವಧಿಯಲ್ಲಿ ಮಧ್ಯಂತರವಾಗಿ ಕಾಣಿಸಿಕೊಳ್ಳಬಹುದು. ರೋಗಲಕ್ಷಣಗಳು ವಿಭಿನ್ನ ರೀತಿಯಲ್ಲಿ ಪ್ರಕಟವಾಗಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿಯ ನಿತ್ಯ ಜೀವನದ ಮೇಲೆ ಪರಿಣಾಮ ಬೀರಬಹುದು. ಒತ್ತಡದ ಪರಿಣಾಮವನ್ನು ಕಡಿಮೆ ಮಾಡಿ ಆತಂಕ ಮತ್ತು ಖಿನ್ನತೆ ನಿವಾರಣೆಗೆ ಧ್ಯಾನವು ವಿಶ್ರಾಂತಿ ಮತ್ತು ವ್ಯಾಯಾಮದಂತೆಯೇ ಸ್ವಯಂ ಹಿತವಾದ ತಂತ್ರವಾಗಿದೆ. ಶಕ್ತಿಯನ್ನು ಸುಧಾರಿಸಿ ನಿರ್ವಹಿಸಲು ಸಹಾಯ ಮಾಡಲು ಅನೇಕ ಜನರು ಯೋಗವನ್ನು ಬಳಸುತ್ತಾರೆ.

ಯೋಗ ಮತ್ತು ಪ್ರಾಣಾಯಾಮ ವನ್ನು ಈ ಪರಿಸ್ಥಿತಿಗಳಿಗೆ ಪರಿಣಾಮಕಾರಿ ಚಿಕಿತ್ಸೆಯೆಂದು ಪರಿಗಣಿಸಲಾಗಿದೆ. ಯೋಗದ ನಿಯಮಿತ ಅಭ್ಯಾಸವು ಶಾಂತವಾಗಿರಲು ಸಹಾಯ ಮಾಡಿದಾಗ, ಪ್ರಾಣಾಯಾಮದೊಂದಿಗೆ ಸರಿಯಾದ ಉಸಿರಾಟವು ಆತಂಕವನ್ನು ಉಂಟುಮಾಡುವ ಆಲೋಚನೆಗಳ ಅನಗತ್ಯ ಗೊಂದಲದಿಂದ ಮನಸ್ಸನ್ನು ನಿವಾರಿಸುತ್ತದೆ. ದುಃಖವು ಜೀವನದ ಅನಿವಾರ್ಯದ ಭಾಗವಾಗಿದೆ. ವಾಸ್ತವವಾಗಿ ದೈನಂದಿನ ಚಟುವಟಿಕೆಗಳಲ್ಲಿ ಆನಂದವನ್ನು ಪಡೆಯಲು ಕಷ್ಟಕರವಾದ ಸಂದರ್ಭವನ್ನು ನಾವೆಲ್ಲರೂ ಎದುರಿಸುತ್ತೇವೆ. ಯೋಗವು ವಿವಿಧ ಹಾರ್ವೇನುಗಳನ್ನು ಉತ್ತೇಜಿಸುವುದರೊಂದಿಗೆ ದೇಹವನ್ನು ವಿಸ್ತರಿಸುತ್ತದೆ. ಹಿಗ್ಗಿಸುವಿಕೆಯು ದೇಹಕ್ಕೆ ವಿಶ್ರಾಂತಿ ನೀಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಅಲ್ಲದೆ ಹಾರ್ವೇನುಗಳು ನರಮಂಡಲವನ್ನು ಸರಿಪಡಿಸಲು ಸಹಾಯಮಾಡುತ್ತದೆ. ದೇಹವನ್ನು ವಿಸ್ತರಿಸುವಾಗ, ಯೋಗವು ಸ್ನಾಯುಗಳ ನಡುವೆ ಸಿಕ್ಕಿಬಿದ್ದ ಒತ್ತಡದ ಬಿಡುಗಡೆ ಯನ್ನು ಉತ್ತೇಜಿಸುತ್ತದೆ. ಋಣಾತ್ಮ ಕತೆಯನ್ನು ತೊಡೆದುಹಾಕಿ ಒತ್ತಡ ಮತ್ತು ಉದ್ವೇಗವನ್ನು ನಿವಾರಿಸಲು ಕೆಲವು ಯೋಗಾಸನಗಳು ಸಹಕಾರಿ ಯಾಗುತ್ತವೆ. ನಿಮ್ಮ ಮನಸ್ಸು, ದೇಹ ಮತ್ತು ಪರಿಸರದೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಒತ್ತಡ ಮತ್ತು ಆತಂಕದ ಭಾವನೆಗಳನ್ನು ಕಡಿಮೆ ಮಾಡಲು ಯೋಗವು ಸಹಾಯ ಮಾಡುತ್ತದೆ. ಕೆಲವು ಭಂಗಿಗಳು ಮತ್ತು ಉಸಿರಾಟದ ತಂತ್ರಗಳ ಮೂಲಕ, ನಿಮ್ಮ ಸ್ವಂತ ವೇಗದಲ್ಲಿ ನಕಾರಾತ್ಮಕ ಆಲೋಚನೆಗಳನ್ನು ನಿಯಂತ್ರಿಸಲು ಸಹಕರಿಸುತ್ತದೆ. ಒತ್ತಡದ ಸಮಯದಲ್ಲಿ ಆತಂಕದ ಭಾವನೆಗಳು ಹರಿದಾಡಲು ಪ್ರಾರಂಭಿಸಿದಾಗ ಅದರ ನಿಯಂತ್ರಣಕ್ಕೆ ಯೋಗವು ಸಹಕಾರಿಯಾಗುತ್ತದೆ.

ಖಿನ್ನತೆಯ ಲಕ್ಷಣಗಳನ್ನು ಸರಾಗಗೊಳಿಸುವ ಯೋಗ ವಿವರಗಳು ಹೀಗಿವೆ: ಆಯ್ದ ಸರಳ ವ್ಯಾಯಾಮಗಳು, ಸೂರ್ಯನಮಸ್ಕಾರ, ಆಸನಗಳಲ್ಲಿ ವೃಕ್ಷಾಸನ, ಅರ್ಧಚಕ್ರಾಸನ, ಪಾದಹಸ್ತಾಸನ, ಕಟಿಚಕ್ರಾಸನ, ತ್ರಿಕೋಣಾಸನ, ಪ್ರಸಾರಿತ ಪಾದೋತ್ಥಾನಾಸನ, ಪರ್ವತಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ವಕ್ರಾಸನ, ಮಾರ್ಜಾಲಾಸನ, ಸೇತುಬಂಧ, ಸರ್ವಾಂಗಾಸನ, ಹಲಾಸನ, ಮಕರಾಸನ, ಅಧೋಮುಖ ಶ್ವಾನಾಸನ, ಶವಾಸನ, ನಾಡೀಶುದ್ಧಿ, ಕಪಾಲಭಾತಿ, ಸುಖಪ್ರಾಣಾಯಾಮ.

ಮುದ್ರೆಗಳು : ಏಕದಂತ ಮುದ್ರೆ ಹತ್ತು ನಿಮಿಷ, ಪ್ರಾಣಮುದ್ರೆಯಲ್ಲಿ ಇಷ್ಟ ದೇವರು ಅಥವಾ ‘ಓಂ ಹಿರಣ್ಯಗರ್ಭಾಯ ನಮಃ’ ಎಂದು 108 ಬಾರಿ ಮಂತ್ರ ಪಠಿಸಿ, ಚಿನ್ಮುದ್ರೆಯಲ್ಲಿ ‘ಐಂ ಹ್ರೀಂ ಐಂ ಹ್ರೀಂ ಓಂ ಸರಸ್ವತೈ ನಮಃ’ ಎಂದು 108 ಬಾರಿ ಪಠಿಸಿ ಅಥವಾ ಇಷ್ಟ ದೇವರನ್ನು ನೆನೆಸಿ. ಕೊನೆಯಲ್ಲಿ ಪುನಃ ಪ್ರಾಣಮುದ್ರೆ ಹತ್ತು ನಿಮಿಷ.

ಯೋಗ ಶಿಕ್ಷಕರ ಸಮ್ಮುಖದಲ್ಲಿ ಮೂರು ತಿಂಗಳು ಯೋಗ ಅಭ್ಯಾಸ ಮಾಡಿ. ಅನಂತರ ನಿತ್ಯ ನಿರಂತರ ಆಯ್ದ ಆಸನಗಳು ಮುದ್ರೆಗಳ ಅಭ್ಯಾಸ ಮಾಡುತ್ತಾ ಬನ್ನಿ. ಆತ್ಮೀಯ ಸ್ನೇಹಿತರೊಂದಿಗೆ ಸ್ವಲ್ಪಹೊತ್ತು ಹರಟೆ ಹೊಡೆಯಿರಿ, ದಿನಾಲು ತಲಾ 10 ನಿಮಿಷ ನೇರಳೆ ಬಣ್ಣ, ನೀಲಿ ಬಣ್ಣ, ಹಸಿರು ಬಣ್ಣಗಳನ್ನು ನೋಡುತ್ತೀರಿ. ಪ್ರೀತಿ, ತಾಳ್ಮೆ, ಕ್ಷಮೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ದೇಹದ ಆರೋಗ್ಯಕ್ಕೆ ಒತ್ತು ಕೊಟ್ಟು ಹಾಗೇ ಮನಸ್ಸಿಗೆ ಮುದ ನೀಡಿ.

(ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net