ಹಿರಿಯ ನಾಗರಿಕರಿಗೆ ಯೋಗ ಹಾಗೂ ಮುದ್ರೆಗಳು

-6862c59710cca
Published on
ಭಾರತದಲ್ಲಿ ಪುರುಷ ಅಥವಾ ಮಹಿಳೆಗೆ 60 ವರ್ಷ ಮೀರಿದರೆ ಅವರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗುತ್ತದೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ 65 ವರ್ಷವಾದರೆ ಅವರನ್ನು ವೃದ್ಧರು ಎಂದು ಕರೆಯುತ್ತಾರೆ. ವೃದ್ಧಾಪ್ಯವು ನಿಸರ್ಗದ ನಿಯಮ. ವೃದ್ಧಾಪ್ಯವನ್ನು ವಾಸಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲಿಯೂ ಮನುಷ್ಯನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಅನೇಕ ಬದಲಾವಣೆಗಳು ಆಗುತ್ತಲೇ ಇರುತ್ತವೆ.

ಹಿರಿಯ ನಾಗರಿಕರು ತಮ್ಮ ಮುಪ್ಪಿನಲ್ಲಿ ಚುರುಕಾಗಿರಬೇಕು. ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮಾತ್ರವಲ್ಲ, ಯಾವಾಗಲೂ ಕ್ರಿಯಾಶೀಲರಾಗಿ ಸಂತೋಷದಿಂದಿರಲು ನಮ್ಮ ಭಾರತೀಯ ಸಂಸ್ಕೃತಿ, ಕಲೆಯಾದ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕಿನ ವಿವಿಧ ಹಂತಗಳನ್ನು ಸರಾಗವಾಗಿ ಕ್ರಮಿಸಲು ಸುಲಭ ಸಾಧ್ಯವಾಗುತ್ತವೆ. ವಯಸ್ಸಾದಂತೆ ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳಾದ ರಕ್ತದ ಒತ್ತಡ, ಮಧುಮೇಹ, ಸೊಂಟದಲ್ಲಿ ನೋವು, ಅಸ್ತಮಾ, ಕೆಮ್ಮು, ಎಲುಬಿನ ಸಾಂದ್ರತೆ ಕಡಿಮೆಯಾಗುವುದು ಇತ್ಯಾದಿ ಬರುವುದುಂಟು.

ಮುಪ್ಪಿನ ಹಂತದಲ್ಲಿ ಶರೀರದ ಎಲ್ಲಾ ಭಾಗಗಳಲ್ಲೂ ಸವಕಲು ಉಂಟಾಗುವುದು, ಮೂತ್ರಕೋಶದ ತೊಂದರೆ ಹಾಗೂ ಮಾನಸಿಕ ಸಮಸ್ಯೆಗಳಾದ ಜ್ಞಾಪಕಶಕ್ತಿ ಕೊರತೆ, ಖಿನ್ನತೆ, ಆಂತರಿಕವಾಗಿ ಹಿಂಜರಿಯುವುದು, ಮಾನಸಿಕವಾಗಿ ಕುಗ್ಗುವುದು, ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ, ಕೌಟುಂಬಿಕ ಸಮಸ್ಯೆ ಇತ್ಯಾದಿಗಳಿಗೆ ವೈದ್ಯರ ತಪಾಸಣೆ ಉಪಚಾರದೊಂದಿಗೆ, ಯೋಗೋಪಚಾರ (ಯೋಗ ಚಿಕಿತ್ಸೆ) ವನ್ನು ನೀಡಿದಾಗ ಆರೋಗ್ಯವನ್ನು ನಿತ್ಯ ನಿರಂತರವಾಗಿ ಕಾಪಾಡಿಕೊಳ್ಳಬಹುದು.

ಮೃದುವಾದ ಯೋಗಾಭ್ಯಾಸವು ಮೂಳೆ ಸಾಂದ್ರತೆಯ ನಷ್ಟವನ್ನು ತಡೆಯಲು ಅಥವಾ ನಿಧಾನಗೊಳಿಸಲು, ಮೂಳೆ ಮತ್ತು ಕೀಲು ನೋವನ್ನು ನಿವಾರಿಸಲು ಮತ್ತು ಆಸ್ಟಿಯೊಪೊರೋಸಿಸ್ ಹೊಂದಿರುವ ಜನರಿಗೆ ಬಹಳ ಪರಿಣಾಮಕಾರಿಯಾಗಿದೆ. ಯೋಗವು ನಿಮ್ಮ ಉಸಿರಾಟವನ್ನು ನಿಧಾನಗೊಳಿಸಲು ಮತ್ತು ಧ್ಯಾನ ಮಾಡಲು ಅನುವು ಮಾಡಿಕೊಡುತ್ತದೆ. ಅದು ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ.

1.ಇದು ನಿಮ್ಮ ಸಮತೋಲನ ಮತ್ತು ತ್ರಾಣವನ್ನು ಸುಧಾರಿಸುತ್ತದೆ. 2. ಒತ್ತಡವನ್ನು ಕಡಿಮೆ ಮಾಡುತ್ತದೆ. 3. ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ.

ಯೋಗದ ಎರಡು ಪ್ರಮುಖ ತತ್ತ್ವಗಳು -ಶಕ್ತಿ ಮತ್ತು ವಿಶ್ರಾಂತಿ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಕೀಲಿಗಳಾಗಿವೆ. ಯೋಗವು ನಿಮ್ಮ ಉಸಿರಾಟ ವನ್ನು ಶಾಂತಗೊಳಿಸುತ್ತದೆ. ಇದು ನಿಮ್ಮ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ.

ಹಿರಿಯ ನಾಗರಿಕರು ತಮಗೆ ಸಾಧ್ಯವಾಗುವ ಸರಳ ವ್ಯಾಯಾಮ ಗಳು, ನಡಿಗೆ, ಆಯ್ದ ಯೋಗಾಸನಗಳಾದ ತಾಡಾಸನ, ಅರ್ಧ ಚಕ್ರಾಸನ, ಪಾದಹಸ್ತಾಸನ, ಅರ್ಧಕಟಿ ಚಕ್ರಾಸನ, ಬದ್ದ ಕೋಣಾಸನ, ಪದ್ಮಾಸನ, ವಜ್ರಾಸನ, ಶಶಾಂಕಾಸನ, ಅರ್ಧ ಉಷ್ಟ್ರಾಸನ, ಊರ್ಧ್ವಪ್ರಸಾರಿತ ಪಾದಾಸನ, ಪವನ ಮುಕ್ತಾಸಾಸನ, ಸೇತುಬಂಧ ಸರ್ವಾಂಗಾಸನ, ಸಾಧ್ಯವಾದರೆ ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಏಕಪಾದ ಶಲಬಾಶನ, ಇತ್ಯಾದಿ ಶವಾಸನ ಹಾಗೂ ಪ್ರಾಣಾಯಾಮಗಳು, ಧ್ಯಾನವನ್ನು, ಮುದ್ರೆಗಳನ್ನು ದಿನಾಲು ಅಭ್ಯಾಸ ಮಾಡಿದಾಗ ಚುರುಕಾಗಲು, ಎಲ್ಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹಾಗೂ ಕ್ರಿಯಾಶೀಲರಾಗಿ ಸಂತೋಷದಿಂದ ತಮ್ಮ ಜೀವನದ ಸಂಜೆಯನ್ನು ಆರಾಮವಾಗಿ ಕಳೆಯಲು ಸುಲಭ ಸಾಧ್ಯವಾಗುತ್ತದೆ. ಯೋಗದ ಜೊತೆಯಲ್ಲಿ ಹಿರಿಯ ನಾಗರಿಕರು ಸಮತೋಲಿತ ಆಹಾರ ಸೇವಿಸಬೇಕು. ಸಕ್ಕರೆ, ಕೊಬ್ಬು ಹಾಗೂ ಉಪ್ಪನ್ನು ಮಿತವಾಗಿ ಸೇವಿಸಿ. ಹಣ್ಣು ಹಂಪಲುಗಳನ್ನು ಸಾಕಷ್ಟು ಸೇವಿಸಿ.

ಮುದ್ರೆಗಳು: ಪ್ರಾಣಮುದ್ರೆಯಲ್ಲಿ ಇಷ್ಟ ದೇವರು ಯಾ ಓಂ ಹಿರಣ್ಯ ಗರ್ಭಾಯ ನಮಃ ಎಂದು 108 ಬಾರಿ ಮಂತ್ರ ಪಠಿಸಿ. ಶೂನ್ಯಮುದ್ರೆ (10 ನಿಮಿಷ), ಆಕಾಶ ಮುದ್ರೆ 20 ನಿಮಿಷ- ಓಂ ನಮೋ ಭಗವತೇ ವಾಸುದೇವಾಯ ಎಂದು 108 ಬಾರಿ ಪಠಣ. (ಕೃಷ್ಣನ ಕೊಳಲು ಕಿವಿಗೆ ಇಂಪು). ಕಿವಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ಯೋಗವನ್ನು ಅಭ್ಯಾಸ ಮಾಡುವ ಮುಂಚೆ ಯೋಗದ ಮಾಹಿತಿ, ಮಹತ್ವ, ಸೂಚನೆ, ನಿಯಮಗಳನ್ನು ಗುರುಮುಖೇನ ತಿಳಿದುಕೊಂಡು ಕಲಿತು ಅಭ್ಯಾಸ ಮಾಡಿ. (ಪ್ರತಿಕ್ರಿಯಿಸಿ: : vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net