

ಎಚ್.ಡಿ. ಕೋಟೆ: ನಿತ್ಯದ ಜೀವನದಲ್ಲಿ ಪ್ರತಿಯೊಬ್ಬರೂ ಯೋಗವನ್ನು ರೂಢಿಸಿಕೊಂಡರೆ, ಉತ್ತಮ ಆರೋಗ್ಯಲಭ್ಯವಾಗುತ್ತದೆ ಎಂದು ಪಡುವಲ ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುಭವನದದಲ್ಲಿ ಬುಧವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 41ನೇ ದಸರಾ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಯೋಗ ಮತ್ತು ಧ್ಯಾನದಿಂದ ಒತ್ತಡ ನಿವಾರಣೆಯಾಗುತ್ತದೆ. ಕಾಯಿಲೆಗಳು ದೂರವಾಗುತ್ತವೆ. ನಮ್ಮ ಹಿರಿಯರು ಉತ್ತಮ ಆಹಾರ ಮತ್ತು ಜೀವನ ಪದ್ಧತಿಯಿಂದ ದೀರ್ಘಾಯುಷ್ಯವನ್ನು ಹೊಂದಿದ್ದರು. ಆದರೆ ಆಧುನಿಕ ಜೀವನ ಪದ್ಧತಿ ಮತ್ತು ರಾಸಾಯನಿಕ ಪೂರಿತ ಆಹಾರ ಬಳಕೆ ಕ್ರಮದಿಂದ ಅನಾರೋಗ್ಯ ಹೆಚ್ಚಾಗಿದೆ. ಹಾಗಾಗಿ ಎಲ್ಲರೂ ಆರೋಗ್ಯವನ್ನು ಪಡೆಯಲು ಇಂತಹ ಶಿಬಿರಗಳ ಪ್ರಾಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಚೀನ ವಿದ್ಯೆ: ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಯೋಗವು ಪ್ರಾಚೀನ ಕಾಲದಿಂದ ಬಂದ ಭಾರತೀಯ ವಿದ್ಯೆ. ಋಷಿಮುನಿಗಳ ಕೊಡುಗೆಯಾಗಿದೆ. ಮನುಷ್ಯ ದೈಹಿವಾಗಿ ಸದೃಢವಾಗಿದ್ದರೆ ಸಾಲದು. ಮಾನಸಿಕವಾಗಿಯು ಸಶಕ್ತನಾಗಿ ಇರಬೇಕು. ಇದಕ್ಕೆ ಯೋಗ ಸಹಕಾರಿ ಎಂದರು.
ಭಾರತೀಯ ಮೂಲದ ಯೋಗ ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆ. ಆದರೆ ಅದರ ಮಹತ್ವವನ್ನು ಮೊದಲು ನಾವು ತಿಳಿದುಕೊಳ್ಳಬೇಕಾಗಿದೆ. ಯೋಗ ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುತ್ತದೆ ಎಂದರು.
ಶಾಂತಿ ವನ ಟ್ರಸ್ಟ್ ನಿರ್ದೇಶಕ ಡಾ. ಶಶಿಕಾಂತ ಜೈನ್ ಮಾತನಾಡಿ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಮೂಲಕ ರಾಜ್ಯದ ವಿವಿಧೆಡೆ 40 ಶಿಬಿರಗಳನ್ನು ಆಯೋಜಿಸಿ 1.40 ಲಕ್ಷ ಜನರಿಗೆ ಯೋಗ ವಿಧಾನ ಕಲಿಸಲಾಗಿದೆ. ಈ ಬಾರಿ 41ನೇ ಶಿಬಿರವನ್ನು ಗ್ರಾಮಾಂತರ ಪ್ರದೇಶದ 80 ಕಡೆ ಸಂಘಟಿಸಲಾಗಿದೆ ಎಂದರು. ವಿದ್ಯಾರ್ಥಿಗಳಿಗೆ ಪಂಚಮುಖಿ ವ್ಯಕ್ತಿತ್ವ ವಿಕಸನ ಯೋಗ ಶಿಬಿರವನ್ನು ಆಯೋಜಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಸೇರಿಸಬೇಕು ಎಂದವರು ಸಲಹೆ ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿಜಯ ಕುಮಾರ, ತಾಲೂಕು ಯೋಜನಾಧಿಕಾರಿ ವಿ.ಭಾಸ್ಕರ, ವಕೀಲರ ಸಂಘದ ಅಧ್ಯಕ್ಷ ಎ.ಸಿ.ರವಿಕುಮಾರ, ರಾಜ್ಯ ಯೋಗ ಸಂಘಟಕ ಶೇಖರ ಕಡ್ತಲ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕನ್ನಡ ಪ್ರಮೋದ ಶಿಬಿರದ ಮೇಲ್ವಿಚಾರಕರಾದ ಪವಿತ್ರಾ, ಭಾರತಿ, ಕೃಷ್ಣಮೂರ್ತಿ, ರೇಖಾ, ವರ್ಷ, ವೀಣಾ ಇತರರು ಇದ್ದರು.