ಯೆಸ್​ ಬ್ಯಾಂಕ್ ಸಂಕಷ್ಟಕ್ಕೆ 30 ದಿನಗಳ ಸಮಯ ಮಿತಿಯಲ್ಲಿ ಪರಿಹಾರ: ಆತಂಕ ಬೇಡ ಎಂದ ಆರ್​ಬಿಐ

shaktikanta-das-pti 6 MAR 20
Published on

ಮುಂಬೈ: ಯೆಸ್ ಬ್ಯಾಂಕ್ ಸಂಕಷ್ಟಕ್ಕೆ ಈಡಾದ ಕಾರಣ ಗ್ರಾಹಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಅದರ ಸಂಕಷ್ಟಕ್ಕೆ ಮೂವತ್ತು ದಿನಗಳ ಸಮಯ ಮಿತಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಯೆಸ್​ ಬ್ಯಾಂಕ್​ನ ವಹಿವಾಟಿ ಮೇಲೆ ನಿರ್ಬಂಧ ಹೇರಿ ಅದನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ನಿರ್ಧಾರವನ್ನು ದೊಡ್ಡ ಮಟ್ಟದಲ್ಲಿ ಚರ್ಚಿಸಿಯೇ ತೆಗೆದುಕೊಳ್ಳಲಾಗಿದೆ. ಇದು ವೈಯಕ್ತಿಕ ಅಥವಾ ವ್ಯಕ್ತಿಗತ ಮಟ್ಟದಲ್ಲಿ ತೆಗೆದುಕೊಂಡ ನಿರ್ಣಯವಲ್ಲ. ಒಟ್ಟಾರೆ ಹಣಕಾಸು ವ್ಯವಸ್ಥೆಯ ಸುರಕ್ಷತೆಯ ದೃಷ್ಟಿ ಈ ನಿರ್ಣಯದ ಉದ್ದೇಶ ಎಂಬುದನ್ನು ಶಕ್ತಿಕಾಂತ ದಾಸ್ ವಿವರಿಸಿದರು.

ಯೆಸ್ ಬ್ಯಾಂಕ್​ ಪುನಶ್ಚೇತನಕ್ಕೆ ಆರ್​ಬಿಐ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಿರುವುದನ್ನು ಖಾತ್ರಿ ಪಡಿಸಿದ ಶಕ್ತಿಕಾಂತ ದಾಸ್, 30 ದಿನಗಳ ಕಾಲಮಿತಿಯಲ್ಲಿ ಯೆಸ್​ ಬ್ಯಾಂಕ್ ಪುನಶ್ಚೇತನಕ್ಕೆ ಆರ್​ಬಿಐ ಪರಿಹಾರ ಕಂಡುಕೊಂಡಿರುತ್ತದೆ ಎಂಬ ಖಾತ್ರಿಯನ್ನೂ ನೀಡಿದರು.

ಮಾರುಕಟ್ಟೆ ಆಧಾರಿತ ಸಮಸ್ಯೆಗೆ ಅದಕ್ಕೆ ಸೂಕ್ತವಾದ ಪರಿಹಾರವನ್ನೇ ಕಂಡುಕೊಳ್ಳಬೇಕು. ಹೀಗಾಗಿ, ಅದರ ಪುನಶ್ಚೇತನಕ್ಕೆ ನೀವು ಬ್ಯಾಂಕು ಮತ್ತು ಆಡಳಿತ ಮಂಡಳಿಗೆ ಸಮಯಾವಕಾಶವನ್ನು ನೀಡಲೇಬೇಕು. ಅವರು ಆ ಪ್ರಯತ್ನದಲ್ಲೇ ಇದ್ದರು. ಆದರೆ ಆ ಪ್ರಯತ್ನ ಕೆಲಸ ಮಾಡುತ್ತಿಲ್ಲ ಎಂಬುದನ್ನು ಗಮನಿಸಿಯೇ ಆರ್​ಬಿಐ ಮಧ್ಯಪ್ರವೇಶಿಸಿದೆ ಎಂದು ದಾಸ್ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net