

ಮುಂಬೈ: ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಂಸ್ಥಾಪಕ ರಾಣಾ ಕಪೂರ್ ಅವರ ಮುಂಬೈ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ಮಾಡಿ, ಶೋಧ ಕಾರ್ಯ ನಡೆಸಿತು. ಕಪೂರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಪೂರ್ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಅಲ್ಲದೆ, ಯೆಸ್ ಬ್ಯಾಂಕ್ನ ಮಾಜಿ ನಿರ್ದೇಶಕರು ದೇಶ ತೊರೆಯದಂತೆ ಮುಂಜಾಗ್ರತ ಕ್ರಮವನ್ನು ವಹಿಸಲಾಗಿದೆ.
ಬ್ಯಾಂಕ್ ನಿರ್ವಹಣೆಯ ಪುನರ್ರಚನೆಗೆ ಕಾರಣವಾದ ಬ್ಯಾಂಕಿನ ಉನ್ನತ ಅಧಿಕಾರಿಗಳಿಂದ ನಡೆದಿರುವ ಕರ್ತವ್ಯ ಲೋಪವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಟ್ಟಿ ಮಾಡಿದ ದಿನದಂದೇ ಈ ಕ್ರಮವನ್ನೂ ತೆಗೆದುಕೊಳ್ಳಲಾಗಿದೆ.
ಅಂದಹಾಗೆ ಕಪೂರ್ ಯೆಸ್ ಬ್ಯಾಂಕ್ ಆರಂಭವಾದ 2004ರಿಂದಲೂ ಸಿಇಒ ಆಗಿದ್ದರು. ತನ್ನ ಅವಧಿಯನ್ನು ವಿಸ್ತರಣೆ ಮಾಡುವಂತೆ ಕೋರಿದ್ದ ಮನವಿಯನ್ನು ಆರ್ಬಿಐ ನಿರಾಕರಿಸಿದ ಬಳಿಕ 2018ರ ಸೆಪ್ಟೆಂಬರ್ನಲ್ಲಿ ಸಿಇಒ ಸ್ಥಾನದಿಂದ ಕೆಳಗೆ ಇಳಿದಿದ್ದರು.
ಸುಸ್ಥಿ ಸಾಲಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತನ್ನ ಸುಪರ್ದಿಗೆ ತೆಗೆದುಕೊಂಡು, ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಆಗಿ ಮಾಡಿದೆ. ನಗದು ವಿತ್ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಗೊಳಿಸಲಾಗಿದ್ದು, ಸಾವಿರಾರು ಗ್ರಾಹಕರು ಹಣ ತೆಗದುಕೊಳ್ಳಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಷೇರು ಮಾರುಕಟ್ಟೆಯಲ್ಲೂ ಯೆಸ್ ಬ್ಯಾಂಕ್ ಪಾಲು ತೀವ್ರ ಕುಸಿತ ಕಂಡಿದೆ. (ಏಜೆನ್ಸೀಸ್)