ಲಾಕ್​ಡೌನ್​ ವೇಳೆ ಆರೋಪಿಗಳ ಪ್ರಯಾಣಕ್ಕೆ ಸಹಾಯ ಮಾಡಿದ ಹಿರಿಯ ಐಪಿಎಸ್‌ ಅಧಿಕಾರಿಗೆ ಶಿಕ್ಷೆ!

Kapil
Published on

ಮುಂಬೈ: ಯೆಸ್‌ ಬ್ಯಾಂಕ್‌ ಹಗರಣದಲ್ಲಿ ಸಿಲುಕಿರುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಡಿಹೆಚ್ಎಲ್ಎಫ್) ಪ್ರವರ್ತಕರಾದ ಕಪಿಲ್ ವಾಧವನ್‌ ಮತ್ತು ಧೀರಜ್ ವಾಧವನ್‌ ಅವರಿಗೆ ಲಾಕ್‌ಡೌನ್‌ ಸಮಯದಲ್ಲಿ ಅನಧಿಕೃತವಾಗಿ ಪ್ರಯಾಣ ಮಾಡಲು ಅನುಮತಿ ನೀಡಿದ ಹಿರಿಯ ಐಪಿಎಸ್‌ ಅಧಿಕಾರಿ ಅಮಿತ್‌ ಗುಪ್ತಾ ಸಿಕ್ಕಿಬಿದ್ದಿದ್ದಾರೆ. ಈ ತಪ್ಪಿಗೆ ಅವರಿಗೆ ಕಡ್ಡಾಯ ರಜೆಯ ಮೇಲೆ ತೆರಳುವ ಶಿಕ್ಷೆ ನೀಡಿ ಗೃಹ ಇಲಾಖೆಯು ಆದೇಶಿಸಿದೆ..

ವಾಧವನ್‌ ಆರೋಪಿಗಳು ತಮ್ಮ 21 ಮಂದಿ ಕುಟುಂಬ ಸದಸ್ಯರ ಜತೆಗೂಡಿ ಲಾಕ್ ಡೌನ್ ನಡುವೆಯೇ ಖಂಡಾಲಾದಿಂದ ಮಹಾಬಲೇಶ್ವರಕ್ಕೆ ಕಳೆದ ಬುಧವಾರ ಸಂಜೆ ತಮ್ಮ ಕಾರಿನಲ್ಲಿ ಪ್ರಯಾಣಿಸಿದ್ದರು. ಇವರು ಪೊಲೀಸ್‌ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಮಾತ್ರವಲ್ಲದೇ ತುರ್ತು ಕೆಲಸಗಳೂ ಇರಲಿಲ್ಲ. ಇದರ ಹೊರತಾಗಿಯೂ ಪೊಲೀಸ್‌ ಇಲಾಖೆಯ ಅನುಮತಿ ಇಲ್ಲದೇ ಗುಪ್ತಾ ಅವರು 23 ಮಂದಿಗೂ ಪಾಸ್‌ ನೀಡಿದ್ದಾರೆ. ಐದು ವಾಹನಗಳಲ್ಲಿ ಕುಟುಂಬ ಪರಾರಿಯಾಗಿದೆ.

ಲಾಕ್‌ಡೌನ್‌ ಮಧ್ಯೆ ಪ್ರಯಾಣದ ನಿಷೇಧದ ಹೊರತಾಗಿಯೂ ಪ್ರಯಾಣ ಮಾಡಿರುವ ಕಾರಣ, ಇವರ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಉಲ್ಲಂಘನೆ ಆರೋಪದ ಮೇಲೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಮಹಾಬಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಗರಣದಿಂದ ತಪ್ಪಿಸಿಕೊಳ್ಳುವ ಸಂಬಂಧ ಈ ರೀತಿ ಪರಾರಿಯಾಗಲು ಅವರು ಯತ್ನಿಸಿದ್ದರು ಎನ್ನಲಾಗುತ್ತಿದೆ. ಎಲ್ಲಾ 23 ಮಂದಿಯನ್ನು ಸದ್ಯ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು ತನಿಖೆ ನಡೆಯುತ್ತಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net